ವಾಹನ ನಿಲ್ದಾಣ, ದನದ ಕೊಟ್ಟಿಗೆಯಾದ ನರೇಗಲ್ಲಿನ ಗಾಂಧಿ ಭವನ!

KannadaprabhaNewsNetwork |  
Published : Jun 26, 2026, 02:45 AM IST
25ಜಿಡಿಜಿ16 | Kannada Prabha

ಸಾರಾಂಶ

ಭವನದ ಸುತ್ತಮುತ್ತ ದನ- ಕರುಗಳು ಸಗಣಿ ಹಾಕಿ ಗಲೀಜು ಮಾಡುತ್ತಿದ್ದು, ಸಾರ್ವಜನಿಕರು ಸಹ ಆಸುಪಾಸಿನಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ವಾಸನೆ ಆವರಿಸಿದೆ.

ನರೇಗಲ್ಲ: ಪಟ್ಟಣದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕಿದ್ದ ಗಾಂಧಿ ಭವನ, ಖಾಸಗಿ ವಾಹನಗಳ ನಿಲ್ದಾಣ ಹಾಗೂ ದನ- ಕರುಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದ್ದು, ಭವನದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿವೃತ್ತ ಸೈನಿಕರ ಸಂಘ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಪಟ್ಟಣ ಪಂಚಾಯಿತಿ ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಗಾಂಧಿ ಭವನವು ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಭವನದ ಸುತ್ತಮುತ್ತ ದನ- ಕರುಗಳು ಸಗಣಿ ಹಾಕಿ ಗಲೀಜು ಮಾಡುತ್ತಿದ್ದು, ಸಾರ್ವಜನಿಕರು ಸಹ ಆಸುಪಾಸಿನಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ವಾಸನೆ ಆವರಿಸಿದೆ. ಇದೇ ಭವನದಲ್ಲಿ ನಿವೃತ್ತ ಸೈನಿಕರ ಸಂಘಕ್ಕೆ ಕಚೇರಿ ನೀಡಲಾಗಿರುವ ಕಾರಣ ಪ್ರತಿ ತಿಂಗಳು ಸಭೆ ನಡೆಸಲು ಸದಸ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಗಾಂಧಿ ಭವನವು ಪ್ರಸ್ತುತ ತೆರೆದ ಸ್ಥಿತಿಯಲ್ಲಿದ್ದು, ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಕಿಟಕಿಗಳು ಹಾಗೂ ಮುಖ್ಯ ದ್ವಾರ ಅಳವಡಿಸಿದರೆ ಜನ ಮತ್ತು ಜಾನುವಾರುಗಳ ಅನಗತ್ಯ ಪ್ರವೇಶವನ್ನು ತಡೆಗಟ್ಟಬಹುದು. ಇದರಿಂದ ಭವನದ ಸ್ವಚ್ಛತೆ ಕಾಪಾಡುವುದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಜು. 26ರಂದು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಇದೇ ಭವನದಲ್ಲಿ ಆಯೋಜಿಸಲು ನಿರ್ಧರಿಸಿರುವುದರಿಂದ, ಅದಕ್ಕೂ ಮುನ್ನ ಅಗತ್ಯ ಮೂಲಸೌಕರ್ಯ ಹಾಗೂ ಸ್ವಚ್ಛತಾ ಕ್ರಮಗಳನ್ನು ಕೈಗೊಂಡು ಭವನಕ್ಕೆ ಕಾಯಕಲ್ಪ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸೀಟು ಹಂಚಿಕೆಯ ಪಟ್ಟಿ ಪ್ರಕಟ

ಗದಗ: 2026- 27ನೇ ಸಾಲಿನ ಡಿಇಎಲ್ಇಡಿ ಕೋರ್ಸಿನ ಸರ್ಕಾರಿ ಕೋಟಾದಡಿ ಸೀಟು ಹಂಚಿಕೆಯ ಪಟ್ಟಿಯನ್ನು ಡಯಟ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಸರ್ಕಾರಿ ಕೋಟಾದಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಗದುಗಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ತಮಗೆ ಹಂಚಿಕೆಯಾಗಿರುವ ಶಿಕ್ಷಣ ಸಂಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು.ನಿಗದಿಪಡಿಸಲಾಗದ ದಾಖಲಾತಿ ಶುಲ್ಕವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ ಡಿಡಿಯನ್ನು ಜು. 4ರೊಳಗಾಗಿ ಪಡೆದು ಮೂಲ ದಾಖಲೆಗಳೊಂದಿಗೆ ಡಯಟ್ ಕೇಂದ್ರಕ್ಕೆ ಸಲ್ಲಿಸಿ ದಾಖಲಾತಿ ಪತ್ರವನ್ನು ಪಡೆದುಕೊಳ್ಳಬೇಕು. ಸಂಬಂಧಿಸಿದ ಶಿಕ್ಷಣ ಸಂಸ್ಥೆಯಲ್ಲಿ ಜು. 6ರೊಳಗಾಗಿ ದಾಖಲಾತಿಯನ್ನು ಪಡೆದುಕೊಳ್ಳಬೇಕು. ಅಂತಿಮ ದಿನಾಂಕದ ನಂತರ ದಾಖಲಾತಿಗೆ ಯಾವುದೇ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ ಹಾಗೂ ಜಿ.ಎಂ. ಮುಂದಿನಮನಿ, ನೋಡಲ್ ಅಧಿಕಾರಿಗಳು ಡಯಟ್ ಗದಗ, ಮೊ. 7619277145 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್ಡಿಎಂಸಿ ಕೊಡುಗೆ ಅನನ್ಯ
ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ!