ಕನ್ನಡಪ್ರಭ ವಾರ್ತೆ ಹಾಸನ

ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಆಧುನಿಕತೆ, ವೈಚಾರಿಕತೆ, ವೈಜ್ಞಾನಿಕತೆ ಹಾಗೆಯೇ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಬೇಕಾಗುವ ಉತ್ತಮ ಗುಣಗಳನ್ನು ಕಲಿತರೆ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಬಹುದು ಎಂದು ಗಂಧದ ಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಅಭಿಪ್ರಾಯಪಟ್ಟರು.

ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಬಿ.ಎ. ಹಾಗೂ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿವಿನ್ಯಾಸ (ಹೊಸ ದಿಗಂತ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆಯು ಹೊಸದಾಗಿ ಪದವಿ ವ್ಯಾಸಂಗಕ್ಕಾಗಿ ಸೇರಿರುವ ಮಕ್ಕಳಿಗೆ ಹೊಸ ದಿಗಂತ ಎಂಬ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು, ವಿವಿಧ ವಿಷಯಗಳ ಕುರಿತು ಅಧ್ಯಾಪಕರು ಮಕ್ಕಳಿಗೆ ಉಪನ್ಯಾಸ ನೀಡುವರು. ಅಭಿವಿನ್ಯಾಸದ ಜೊತೆ ಜೊತೆಗೆ ಇನ್ನಿತರ ಪೂರಕ ಮಾಹಿತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು. ವಿದ್ಯಾರ್ಥಿನಿಯರು ನಿಂತ ನೀರಾಗಬಾರದು, ಸದಾ ಹರಿಯುವ ನದಿಯಂತೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಪಡೆಯಬೇಕು. ಕುವೆಂಪು ಅವರ ನಾಣ್ಣುಡಿಯಾದ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬುವುದರ ಅರ್ಥವನ್ನು ಮಕ್ಕಳು ಅರಿಯಬೇಕು. ಸರ್ಕಾರ ಪದವಿ ಕಾಲೇಜುಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದನ್ನು ವಿದ್ಯಾರ್ಥಿನಿಯರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಪಠ್ಯದ ವಿಷಯಗಳ ಜೊತೆ ಜೊತೆಗೆ ವೈಚಾರಿಕತೆ, ವೈಜ್ಞಾನಿಕತೆ, ತಾಂತ್ರಿಕ, ಹೊಸತನ ಇದೆಲ್ಲವನ್ನು ಕಲಿಯಬೇಕು. ಎಲ್ಲ ಶಿಕ್ಷಕರಿಗೂ ಅವರದೆ ಆದ ಗುಣ ವಿಶೇಷ ಇದೆ. ಹಾಗಾಗಿ ಎಲ್ಲ ಶಿಕ್ಷಕರಿಗೂ ಗೌರವ ಸಲ್ಲಿಸುವುದನ್ನು ವಿದ್ಯಾರ್ಥಿಗಳು ಮಾಡಬೇಕು. ತಾವು ಆಯ್ಕೆ ಮಾಡಿಕೊಂಡ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಸಂಪಾದನೆ ಮಾಡುವುದರ ಮೂಲಕ ಪದವಿ ಮುಗಿಸಿದ ನಂತರ ಪಡೆದುಕೊಂಡ ಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಪಠ್ಯದೊಂದಿಗೆ ಕಾಲೇಜು ಹಂತದಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿ ಆ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಮುಖ್ಯ ಹಾಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕು. ಹಾಗೆಯೇ ಕಾಲೇಜುಗಳಲ್ಲಿ ನಡೆಯುವ ಪ್ರತಿಯೊಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ಸಂಪಾದನೆ ಮಾಡಬೇಕು ಎಂದರು.

ಅಭಿವಿನ್ಯಾಸ (ಹೊಸ ದಿಗಂತ) ಕಾರ್ಯಕ್ರಮದ ಸಂಯೋಜಕರಾದ ಡಾ. ಸುನೀತ ಜಿ, ಡಾ. ಕಾಂತೇಶ್, ಅಧ್ಯಾಪಕರಾದ ಜಿ.ಆರ್. ಮೋಹನ್ ಕುಮಾರ್, ಡಾ. ಶಿವಕುಮಾರ್ ಸಿ.ಎಲ್., ಸುರೇಶ್ ಕುಮಾರ್, ನಂದನ್ ಪಿ., ಡಾ. ಸುರೇಶ್ ಕುಮಾರ್ ಕೆ.ಆರ್., ಗ್ರಂಥಪಾಲಕ ಡಾ. ಮರಿರಾಜ್ ಸೇಡಂ ಹಾಗೂ ಇತರರು ಹಾಜರಿದ್ದರು.