ಸಿರುಗುಪ್ಪ: ತಾಲೂಕಿನ ಹಾಗಲೂರು- ಹೊಸಳ್ಳಿ ಗ್ರಾಪಂಗೆ 2024-25ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ದೊರೆತಿದೆ.
ಕುಡಿಯುವ ನೀರಿನ ಕಾಮಗಾರಿಗಳು, ರಸ್ತೆಗಳು, ಒಳಚರಂಡಿ, ಮಿನಿ ವಾಟರ್ ಟ್ಯಾಂಕ್, ನೀರಿನ ಪೈಪ್‌ಲೈನ್ ಗಳು, ಅಂಗನವಾಡಿ ಶಾಲಾ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸೆರಬರಾಜು ಮಾಡಲಾಗಿದೆ. ಖಾಲಿಪ್ರದೇಶಗಳನ್ನು ಪತ್ತೆ ಹಚ್ಚಿ ಅಲ್ಲಿ ಗಿಡ ನೆಡುವುದು, ನೀರು ಹಾಕಿ ಪೋಷಣೆ. ಮರಗಳು ಬೆಳೆಯುವಂತೆ ಮಾಡುವುದು. ವಾಣಿಜ್ಯ ಮಳಿಗೆಗಳು ಮತ್ತು ಬಂಡಿ ದೊಡ್ಡಿಯ ಪಾರದರ್ಶಕ ಹರಾಜು, ಗಂಗೊತ್ರಿ ಸಂಜೀವಿನಿ ಮಹಿಳಾ ಒಕ್ಕೂಟದ ಜೊತೆಗೆ ತೆರಿಗೆ ವಸೂಲಿ, ಪ್ರತಿ ದಿನ ಹಳ್ಳಿಗಳಲ್ಲಿ ಕಸ ಸಂಗ್ರಹ ಮಾಡಿ ಗ್ರಾಮಗಳನ್ನು ಸ್ವಚ್ಛ ಮಾಡಲಾಗುತ್ತಿದ್ದು, ಸ್ವಚ್ಛ ಭಾರತ್ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದ್ದು, ಗ್ರಾಪಂ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಆಗಿ ಮಾಡಲಾಗಿದೆ. ಕಾಲಕಾಲಕ್ಕೆ ಸಭೆಗಳ ಆಯೋಜನೆ ಮಾಡಿ ಸಾರ್ವಜನಿಕರು ಭಾಗವಹಿಸಲು ಹೆಚ್ಚು ಒತ್ತು ನೀಡಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳ ಸಭೆ ಆಯೋಜನೆ, ಕುಡಿಯುವ ಮತ್ತು ಬಳಸುವ ಬೋರ್ ನೀರನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಎರಡು ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳ ಗುರುತಿಸಲು ನಾಮಫಲಕಗಳನ್ನು ಅಳವಡಿಸಲಾಗಿದೆ. ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳು ನಿರಂತರ ಸ್ವಚ್ಛತೆ, ಗ್ರಾಮ ಸಭೆ ವಾರ್ಡ್ ಸಭೆ ಆಯೋಜನೆ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಭವಿಷ್ಯದ ಯೋಜನೆಗಳು:ದಿನದ 24 ಗಂಟೆ ಗ್ರಾಮಸ್ಥರಿಗೆ ನೀರು ಒದಗಿಸುವುದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮಿನಿ ಆ್ಯಂಬುಲೆನ್ಸ್ ಒದಗಿಸುವುದು, ಗ್ರಾಮದಲ್ಲಿ ಹಸಿರೀಕರಣ ಮಾಡುವುದು, ಕಸ ನಿರ್ವಹಣೆಗೆ ಕಾಯಂ ಘಟಕ ನಿರ್ಮಿಸುವುದು, ಸ್ಮಶಾನಗಳನ್ನು ಶಾಂತಿಧಾಮವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಅನುಷ್ಠಾನ ಕೊಡಿಸಲು ಯೋಚನೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಹಾಗಲೂರು-ಹೊಸಳ್ಳಿ ಗ್ರಾಪಂ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ಸಹಕಾರ ನೀಡಿದ್ದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಇದರಿಂದಾಗಿ ಗಾಂಧಿಗ್ರಾಮ ಪುರಸ್ಕಾರ ಬಂದಿರುವುದು ಸಂತಸ ತಂದಿದೆ ಎಂದು ಪಿಡಿಒ ಎಂ.ಹುಸೇನ್ ಪೀರಾಸಾಬ್ ತಿಳಿಸಿದ್ದಾರೆ.