ಹುಬ್ಬಳ್ಳಿ:
ಇಲ್ಲಿನ ಕೆಎಂಸಿಆರ್‌ಐನ ಮುಖ್ಯದ್ವಾರದ ಬಳಿ ಇರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿ ಚಿತಾಭಸ್ಮದ ಸ್ಥಳದ ವರೆಗೆ ಪಾದಯಾತ್ರೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ, ಮಹಾತ್ಮ ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ನಡೆಯುತ್ತಿದೆ ಎಂದರು.ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಂದ ನಾಥೂರಾಮ ಘೋಡ್ಸೆ ಮತ್ತು ಮನುಸ್ಮೃತಿಯನ್ನು ಒಪ್ಪುವ ಮನಸ್ಥಿತಿಯವರು ದೇಶವನ್ನಾಳುತ್ತಿರುವುದು ವಿಷಾದನೀಯ. ಇಂದು ದೇಶದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಮೊದಲು ಆಡಳಿತ ಪಕ್ಷದವರು ವಿರೋಧ ಪಕ್ಷದವರ ವಿಶ್ವಾಸ ತೆಗೆದುಕೊಂಡು ಅವರಿಗೆ ಗೌರವ ನೀಡಿ ದೇಶದ ಉನ್ನತಿಗೆ ಸರ್ಕಾರಗಳು ಶ್ರಮಿಸುತ್ತಿದ್ದವು. ಆದರೆ ಇಂದು ವಿರೋಧ ಪಕ್ಷದವರನ್ನು ದೇಶದ ಶತ್ರುಗಳಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯುವಪೀಳಿಗೆ ದೇಶಕ್ಕಾಗಿ ಮಹನೀಯರು ನೀಡಿದ ಬಲಿದಾನ ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು. ದೇಶದ ಐಕ್ಯತೆಗೆ ಪ್ರತಿಯೊಬ್ಬರೂ ಹೋರಾಡಬೇಕು. ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಂವಿಧಾನದ ಆಶಯದಂತೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.