ಸಚಿವದ್ವಯರ ತವರು ಗ್ರಾಪಂಗೆ ಗಾಂಧಿಗ್ರಾಮ ಗರಿ!

KannadaprabhaNewsNetwork | Published : Oct 2, 2024 1:04 AM

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರತಿವರ್ಷ ಗಾಂಧಿಗ್ರಾಮ ಪುರಸ್ಕಾರ ನೀಡುತ್ತಿದ್ದು, ಈ ಬಾರಿ ಜಿಲ್ಲೆಯ 11 ತಾಲೂಕುಗಳ ತಲಾ ಒಂದು ಪಂಚಾಯ್ತಿಗೆ ಈ ಗೌರವ ದೊರಕಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರತಿವರ್ಷ ಗಾಂಧಿಗ್ರಾಮ ಪುರಸ್ಕಾರ ನೀಡುತ್ತಿದ್ದು, ಈ ಬಾರಿ ಜಿಲ್ಲೆಯ 11 ತಾಲೂಕುಗಳ ತಲಾ ಒಂದು ಪಂಚಾಯ್ತಿಗೆ ಈ ಗೌರವ ದೊರಕಿದೆ. ಪುರಸ್ಕೃತ ಪ್ರತಿ ಗ್ರಾಪಂಗೆ ತಲಾ 5 ಲಕ್ಷ ರು ಬಹುಮಾನ ನೀಡಿ ಗಾಂಧಿ ಜಯಂತಿ ದಿನ ಸತ್ಕಾರ ಮಾಡಲಾಗುತ್ತದೆ.

ಈ ಪೈಕಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತವರೂರು ಗುಂಡಗುರ್ತಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರ ತವರೂರು ಊಡಗಿ ಗ್ರಾಪಂ ಪುರಸ್ಕಾರಕ್ಕೆ ಏಕಕಾಲಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಇತರೆ ಪಂಚಾಯ್ತಿಗಳ ಗಮನ ಸೆಳೆದಿದೆ ಹಾಗೂ ಸಹಜವಾಗಿಯೇ ಸುದ್ದಿಗೆ ಗ್ರಾಸವಾಗಿದೆ.

ಹಲವು ಅಗ್ನೀಪರೀಕ್ಷೆಗಳಿಗೆ ಒಡ್ಡಿ ಪಂಚಾಯ್ತಿಗಳನ್ನು ಆಯ್ಕೆ ಮಾಡಿದ್ದೇವೆಂದು ಜಿಪಂ ಹೇಳಿಕೊಂಡಿದೆಯಾದರೂ, ಸಚಿವದ್ವಯರ ತವರು ಗ್ರಾಪಂಗೆ ಸಿಕ್ಕಿರುವ ಪುರಸ್ಕಾರ ಪಂಚಾಯ್ತಿಗಳಲ್ಲಾದ ಸಾಧನೆಗೆ ಸಿಕ್ಕ ಮನ್ನಣೆಯೋ ಅಥವಾ ರಾಜಕೀಯ ಪ್ರಭಾವ, ನಿರ್ಣಯಗಳು ಕಾರಣವೋ? ಎಂಬ ಜಿಜ್ಞಾಸೆಗೂ ಕಾರಣವಾಗಿದೆ.

ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್‌ ಖರ್ಗೆಯವರೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವರೂ ಆಗಿದ್ದು, ಇದೇ ಖಾತೆಯಿಂದಲೇ ಗಾಂಧಿಗ್ರಾಮ ಪುರಸ್ಕಾರ ಆಯ್ಕೆ ನಡೆಯೋದರಿಂದ ಪಂಚಾಯ್ತಿ ಹಂತದಲ್ಲಿ ಇಂತಹ ಚರ್ಚೆಗೆ ಆಸ್ಪದವಾದಂತಾಗಿದೆ.

ಆಯ್ಕೆ ಮಾನದಂಡ ಏನು?

ರಸ್ತೆ, ಬೀದಿ ದೀಪಗಳ ನಿರ್ವಹಣೆ, ಮನೆಗಳಿಂದ ತ್ಯಾಜ್ಯ ಸಂಗ್ರಹ - ವಿಲೇವಾರಿ, ಶೌಚಾಲಾಯ ನೈರ್ಮಲ್ಯ - ನಿರ್ವಹಣೆ, ಘನತ್ಯಾಜ್ಯ ಸಂಗ್ರಹ ವಾಹನಗಳಿಗೆ ಮಹಿಳಾ ಚಾಲಕರ ನೇಮಕ, ಹಳ್ಳಿಗಳ ಮೂಲ ಸವಲತ್ತು, ಬಾಪೂಜಿ ಸೇವಾ ಕೇಂದ್ರದಲ್ಲಿನ ಸೇವೆ ಗುಣಮಟ್ಟ, ಅರಿವು ಕೇಂದ್ರಗಳ ಸಬಲೀಕರಣ, ಓದುವ ಬೆಳಕು ಅನುಷ್ಠಾನ ಸೇರಿ ಹತ್ತು ಹಲವು ಮಾನದಂಡಗಳಲ್ಲಿನ ಉತ್ತಮ ಸಾಧನೆ ಪರಿಗಣಿಸಿ ಪುರಸ್ಕಾರಕ್ಕೆ ಆರಿಸಲಾಗುತ್ತಿದೆ.

ಪುರಸ್ಕಾರ ಬಾಬ್ತು ದೊರೆಯುವ 5 ಲಕ್ಷ ರು ಅನುದಾನದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಅವಕಾಶಗಳಿವೆ.

ಪ್ರಶ್ನಾವಳಿ ಮೂಲಕ ಸರ್ವೆ ಮಾಡಿ ಪಂಚಾಯ್ತಿಗಳನ್ನು ಗುರುತಿಸಲಾಗುತ್ತದೆ. ನಂತರ ಹಲವು ಪಂಚಾಯ್ತಿಗಳ ಪಟ್ಟಿ ಮಾಡಿ ಅದರಲ್ಲಿ ನೋಡಲ್‌ ಅಧಿಕಾರಿ ನೇಮಿಸಿ ಸಾಧನೆ ಮಾಡಿದ ಪಂಚಾಯ್ತಿ ಅಂತಿಮಗೊಳಿಸಲಾಗುತ್ತದೆ. ಹೀಗೆ ನಡೆಯುವ ಪ್ರಕ್ರಿಯೆ ಮೂಲಕವೇ ಪುರಸ್ಕಾರಕ್ಕೆ ಪಾತ್ರವಾಗುವ ಪಂಚಾಯ್ತಿಗಳ ಆಯ್ಕೆ ನಡೆಯುತ್ತದೆ ಎಂದು ಜಿಪಂ ಮೂಲಗಳು ಹೇಳಿವೆ.

ಪುರಸ್ಕಾರಕ್ಕೆ ಪಾತ್ರವಾದ ಗ್ರಾಪಂಗಳು

1) ಅಫಜಲ್ಪುರ- ಅಳ್ಳಗಿ (ಬಿ)

2) ಆಳಂದ- ಮುನ್ನಳ್ಳಿ

3) ಚಿಂಚೋಳಿ- ಚಂದನಕೇರಾ

4) ಚಿತ್ತಾಪುರ- ಗುಂಡಗುರ್ತಿ

5) ಜೇವರ್ಗಿ- ಕಲ್ಲೂರ್‌

6) ಕಲಬುರಗಿ - ಹರಸೂರ್‌

7) ಕಮಲಾಪುರ- ಅಂಬಲಗಾ

8) ಕಾಳಗಿ- ಮಾಡಬೂಳ

9) ಸೇಡಂ- ಊಡಗಿ

10) ಶಹಾಬಾದ್‌- ಮುಗುಳ್‌ನಾಗಾವ್‌

11) ಯಡ್ರಾಮಿ- ಸಾಥಖೇಡ್‌

Share this article