ಗಾಂಧೀಜಿ ಆದರ್ಶಗಳನ್ನು ವಿಶ್ವವೇ ಒಪ್ಪಿದೆ

KannadaprabhaNewsNetwork |  
Published : Oct 03, 2024, 01:26 AM IST
ಪರಮೇಶ್ವರ್ ಚಾಲನೆ | Kannada Prabha

ಸಾರಾಂಶ

ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಉಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಉಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.ಮಹಾನಗರ ಪಾಲಿಕೆ ವತಿಯಿಂದ ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನಿರ್ಮಿಸಿರುವ ಕಲಾಕೃತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಹಲವಾರು ದೇಶಗಳು ಗಾಂಧೀಜಿಯವರ ಆದರ್ಶಗಳನ್ನು ಒಪ್ಪಿ, ಅಳವಡಿಸಿಕೊಂಡಿವೆ. ಇದಕ್ಕೆ ಸಾಕ್ಷಿಯಾಗಿ ಬಹುತೇಕ ಪ್ರಪಂಚದ ಎಲ್ಲ ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಆಫ್ರಿಕಾ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ಗಾಂಧೀಜಿಯವರ ಆದರ್ಶಗಳೇ ಪ್ರೇರಣೆಯಾಗಿದ್ದವು. ಗಾಂಧಿ ಭಾರತದ ಶಕ್ತಿಯಾಗಿದ್ದರು. ಗಾಂಧೀಜಿಯವರನ್ನು ಪಡೆದ ನಾವೆಲ್ಲ ಅದೃಷ್ಟವಂತರು ಎಂದು ಅವರು ಎಂದು ಹೇಳಿದರು.ಅಮಾನಿಕೆರೆಯ ಹನ್ನೊಂದು ಮೂರ್ತಿ ಗಳು ಭಾರತದ ಸ್ವಾತಂತ್ರ್ಯಗ ಸಂಗ್ರಾಮದ ಪ್ರಮುಖ ಚಳುವಳಿಯಾದ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ. ಗ್ಯಾರಮೂರ್ತಿ ಕಲಾಕೃತಿ ನಿರ್ಮಿಸಿದ ಮಧುಗಿರಿಯ ದೇವರಾಜು ಅವರನ್ನು ಅಭಿನಂದಿಸಿದ ಸಚಿವರು ಈ ದಿನ ಗಾಂಧೀ ಜಯಂತಿಯೊಂದಿಗೆ ಮತ್ತೊಬ್ಬ ದೇಶದ ಮಹಾನ್ ನಾಯಕ ಲಾಲ್‌ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದರು. ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಚರಿತ್ರೆಯನ್ನು ನಾವೆಂದೂ ಮರೆಯದೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರಲ್ಲದೆ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಹೋರಾಡಿ ತ್ಯಾಗ-ಬಲಿದಾನ ಮಾಡಿದವರನ್ನು ನಾವಿಂದು ಸ್ಮರಿಸಬೇಕೆಂದು ತಿಳಿಸಿದರು. ಸಂಸದ ವಿ. ಸೋಮಣ್ಣ ಹಾಗೂ ನಾನು ಇಬ್ಬರೂ ಸೇರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧವಿಲ್ಲದೆ ಒಟ್ಟಾಗಿ ಶ್ರಮಿಸುತ್ತೇವೆ. ನಗರದ ೨ ಕಡೆ ಬೃಹತ್ ಸ್ವಾಗತ ಕಮಾನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ಮಾತನಾಡಿ ಸ್ವಚ್ಛ ಭಾರತ ಗಾಂಧಿಯವರ ಕನಸಾಗಿತ್ತು. ಗಾಂಧಿ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವು ಯಶಸ್ವಿ ಕಂಡಿದೆ. ವಿಶ್ವದ ಭೂಪಟದಲ್ಲಿ ದೇಶದ ಹೆಸರನ್ನು ಗುರುತಿಸುವಂತೆ ಮಾಡಿರುವ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತ್ರಿಯರಂತಹ ಸಾಧಕರ ಮಾರ್ಗದಲ್ಲಿ ನಮ್ಮ ಮಕ್ಕಳು ನಡೆಯುವಂತಾಗಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಭಾರತದ ಸ್ವಾತಂತ್ರ್ಯದ 25ನೇ ವರ್ಷದ ನೆನಪಿನಲ್ಲಿ ಮೊದಲ ಬಾರಿಗೆ 1972 ರಲ್ಲಿ ಈ ಕಲಾಕೃತಿಯನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು. ಶ್ರೀ ದೇವಿಪ್ರಸಾದ್ ಚೌಧುರಿ ಅವರು ಈ ಕಲಾಕೃತಿಯ ಸೃಷ್ಟಿ ಕರ್ತರು ಎಂದು ತಿಳಿಸಿದರು.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಮಾಜಿ ಸೈನಿಕರಾದ ಸುಬೇದಾರ್ ಬಿ. ಲಿಂಗಣ್ಣ, ಸಾರ್ಜೆಂಟ್ ಸಿ. ಪಾಂಡುರಂಗ, ಹವಾಲ್ದಾರರುಗಳಾದ ಪ್ರಸನ್ನಕುಮಾರ್, ನವೀನ್, ಗಂಗಯ್ಯ, ವಿ.ಡಿ. ನಾಗರಾಜು, ಪುಟ್ಟ ಬಾಲಯ್ಯ, ರಾಜಣ್ಣ, ಡಿ.ಎಲ್ ರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು, ಅವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ