ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಗಾಂಧೀಜಿ ಅಭಿಪ್ರಾಯವಾಗಿತ್ತು: ಎಚ್.ಆರ್.ಸುಜಾತ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಸ್ವಾತಂತ್ರ್ಯ ಎನ್ನುವುದು ಮಹಿಳೆಯರ ಹಕ್ಕು, ಶಿಕ್ಷಣವು ಹೆಣ್ಣು ಮಕ್ಕಳಿಗೆ ಸಿಗಬೇಕು. ಅದನ್ನು ಪುರುಷರ ವಿರುದ್ಧ ಹೋರಾಟ ಮಾಡಿ ಪಡೆದುಕೊಳ್ಳುವಂತಾಗಬಾರದು. ಅಸ್ಪೃಶ್ಯತಾ ನಿವಾರಣೆ, ಜನರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವುದು ಸೇರಿದಂತೆ ಹಲವು ಪರಿಕಲ್ಪನೆಗಳನ್ನು ಹೊಂದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂಬುದು ಗಾಂಧೀಜಿ ಅವರ ಅಭಿಪ್ರಾಯವಾಗಿತ್ತು ಎಂದು ಕವಯತ್ರಿ ಎಚ್.ಆರ್.ಸುಜಾತ ತಿಳಿಸಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀ ಕಂಠೇಗೌಡ ಸಂಶೋಧನಾ ಕೇಂದ್ರದಿಂದ ನಡೆದ ಕವಿತಾ ಸ್ಮಾರಕ ಉಪನ್ಯಾಸ, ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ 2024 ಕಾರ್ಯಕ್ರಮದಲ್ಲಿ

ಗಾಂಧಿ ಮತ್ತು ಮಹಿಳೆ ಕುರಿತು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಎನ್ನುವುದು ಮಹಿಳೆಯರ ಹಕ್ಕು, ಶಿಕ್ಷಣವು ಹೆಣ್ಣು ಮಕ್ಕಳಿಗೆ ಸಿಗಬೇಕು. ಅದನ್ನು ಪುರುಷರ ವಿರುದ್ಧ ಹೋರಾಟ ಮಾಡಿ ಪಡೆದುಕೊಳ್ಳುವಂತಾಗಬಾರದು. ಅಸ್ಪೃಶ್ಯತಾ ನಿವಾರಣೆ, ಜನರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವುದು ಸೇರಿದಂತೆ ಹಲವು ಪರಿಕಲ್ಪನೆಗಳನ್ನು ಹೊಂದಿದ್ದರು ಎಂದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆನ್ನುವ ಭಾವನೆಯು ಗಂಡಸರಲ್ಲಿಯೂ ಬರಬೇಕು. ಜೊತೆಗೆ ಪುರುಷರು ತಮ್ಮನ್ನು ತಾವು ಶುದ್ಧ ಮಾಡಿಕೊಳ್ಳುವಂತೆ ಗಾಂಧಿ ಅವರು ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿರುವುದು ಜಗಜ್ಜಾಹೀರು ಎಂದು ವಿವರಿಸಿದರು.

ಮಹಿಳೆಯರು ಪುರುಷರಂತೆ ಸಮಾನವಾಗಿರಬೇಕೆನ್ನುವ ಉದ್ದೇಶದಿಂದಲೇ ಮಹಿಳೆಯರು ಶ್ರಮಪಡುತ್ತಾರೆ ನಿಜ. ಆದರೆ, ಅನೇಕ ಮಹಿಳೆಯರು ಪುರುಷರ ಮೇಲೆ ತಪ್ಪನ್ನು ಹಾಕಿ ತಮ್ಮ ಪಾಡಿಗೆ ಇದ್ದು ಬಿಡುವುದು ಸಹ ತಪ್ಪಾಗುತ್ತದೆ ಎಂಬುದನ್ನು ಗಾಂಧಿ ಅವರು ಹೇಳಿದ್ದರು. ನಿಮ್ಮ ಸ್ನೇಹಿತೆಯರು, ಅಕ್ಕತಂಗಿಯರ ನಡುವೆ ಒಂದು ಚರ್ಚೆಯನ್ನು ಮಾಡಿ ಸುಧಾರಣೆ ಕಂಡು ಕೊಳ್ಳಬೇಕು ಎಂಬ ಆಶಯವನ್ನು ತಿಳಿಸಿದ್ದರು ಎಂಬುದನ್ನು ಹೇಳಿದರು.

ಗಾಂಧೀಜಿಯವರು ವಿಧವೆಯರ ಪುನರ್‌ವಿವಾಹ ಬಹಳ ಮುಖ್ಯವಾಗಿದೆ. ಇಲ್ಲಿ ಪುರುಷರು ಮನಸ್ಸು ಮಾಡಬೇಕು ಎಂದಿದ್ದಾರೆ. ವಿಧವೆಯರ ಸ್ಥಿತಿ ಯೋಚಿಸಿದಾಗ ಜಾತಿಯನ್ನು ಮೀರಿ ಯುವಕರು ಮುಂದೆ ಬರಬೇಕೆನ್ನುವ ಮಾತನ್ನೂ ಹೇಳಿದ್ದಾರೆ. ಪುರುಷರು ತಮ್ಮ ಕಾಮೇಚ್ಛೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನತದೃಷ್ಟ ವೇಶ್ಯೆಯರನ್ನು ಗೌರವದಿಂದ ಬದುಕಲು ಅನುಕೂಲವಾಗುವ ಹಾಗೆ ಮಹಿಳೆಯರು ಗೌರವವಾಗಿ ಬದುಕಲು ಉದ್ಯೋಗ ಕಲಿಸಬೇಕು ಎಂಬ ಸಂದೇಶ ನೀಡಿದ್ದಾರೆ ಎಂದರು.

ಮೈಸೂರು ಕುವೆಂಪು ಅಧ್ಯಯನ ಸಂಶೋಧನಾ ಸಹಾಯಕಿ ಕೆ.ಎಲ್.ದಿವ್ಯಾ ಅಭಿನಂದನಾ ನುಡಿಯಾಡಿದರು. ನಿವೃತ್ತ ಪ್ರಾಧ್ಯಾಪಕ ಮ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕವಯಿತ್ರಿ ಎಚ್.ಆರ್.ಸುಜಾತಾ ಅವರಿಗೆ ಕವಿತಾ ಸ್ಮಾರಕ ಪ್ರಶಸ್ತಿ ಮತ್ತು 15 ಸಾವಿರ, ಫಲಕ ನೀಡಲಾಯಿತು. ಸಮಾರಂಭದಲ್ಲಿ ಸಾಹಿತಿ ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಉಪನ್ಯಾಸಕಿ ದೇವಿಕಾ ಭಾಗವಹಿಸಿದ್ದರು.

Share this article