ಭಟ್ಕಳ: ತಾಲೂಕಿನಾದ್ಯಂತ ವರ್ಷಂಪ್ರತಿಯಂತೆ ಈ ಸಲವೂ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಸಡಗರದಿಂದ ನಡೆಯಲಿದೆ.
ಮಂಗಳವಾರ ಪಟ್ಟಣದಲ್ಲಿ ಗಣೇಶ ಹಬ್ಬದ ಖರೀದಿ, ವ್ಯಾಪಾರ-ವಹಿವಾಟು ಜೋರಾಗಿತ್ತು. ತಾಲೂಕಿನಲ್ಲಿ ಸಾರ್ವಜನಿಕವಾಗಿ 120 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅದರಂತೆ ಮನೆ ಮನೆಗಳಲ್ಲಿಯೂ ಗಣೇಶ ಮೂರ್ತಿಯನ್ನು ಮೂರ್ತಿಷ್ಠಾಪಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಗಣೇಶ ಚತುರ್ಥಿಯನ್ನು ಒಂದು ದಿನದಿಂದ 7 ದಿನಗಳವರೆಗೂ ಆಚರಿಸಲಾಗುತ್ತದೆ. ಗಣೇಶ ಮೂರ್ತಿ ವಿಸರ್ಜನೆ ಕೂಡ ಮೆರವಣಿಗೆ ಮೂಲಕ ನಡೆಸಲಾಗುತ್ತದೆ. ಮಂಗಳವಾರವಿಡೀ ಪಟ್ಟಣದಲ್ಲಿ ಗಣೇಶ ಹಬ್ಬಕ್ಕೆ ಸಾಮಗ್ರಿ, ಹೂವು ಹಣ್ಣು, ಅಲಂಕಾರಿಕಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಪಟ್ಟಣದಲ್ಲಿ ಖರೀದಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಹೂವು ಹಣ್ಣು, ಅಗತ್ಯ ವಸ್ತುಗಳ ದರ ಗಗನಕ್ಕೇರಿದ್ದರೂ ಹಬ್ಬದ ಹಿನ್ನೆಲೆಯಲ್ಲಿ ಎಲ್ಲವೂ ಅನಿವಾರ್ಯವಾಗಿ ಖರೀದಿಸಲೇ ಬೇಕಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವು, ಹಣ್ಣು, ಸಾಮಗ್ರಿಗಳ ಬೆಲೆ ಬಲು ದುಬಾರಿಯಾಗಿದೆ. ಸಾಮಗ್ರಿಗಳ ಬೆಲೆ ಎಷ್ಟೇ ದುಬಾರಿ ಆದರೂ ಗಣೇಶ ಹಬ್ಬ ಆಚರಣೆ ವರ್ಷಂಪ್ರತಿ ವಿಜೃಂಭಣೆಗೆ ಕೊರತೆಯಾಗದು ಎಂದು ಜನರು ಹೇಳುತ್ತಿರುವುದು ಕೇಳಿ ಬಂತು. ಮಂಗಳವಾರ ಪಟ್ಟಣದ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಗೌರಿ ಪ್ರತಿಷ್ಠಾಪಿಸಿ ಗೌರಿ ಗಣೇಶ ಹಬ್ಬವನ್ನು ಸಹ ಆಚರಿಸಲಾಗಿದೆ. ತಾಲ್ಲೂಕಿನಲ್ಲಿ ಕೆಲವು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ 25 ವರ್ಷ ತುಂಬಿದ್ದರಿಂದ ಬೆಳ್ಳಿ ಮಹೋತ್ಸವ ಆಚರಿಸಿ ವಿವಿಧ ಸ್ಪರ್ಧೆ, ಸಾಂಸ್ಕೃತಿ ಕಾರ್ಯಕ್ರಮ , ಅನ್ನಸಂತರ್ಪಣೆ ಮುಂತಾದವುಗಳನ್ನು ಆಯೋಜಿಸಲಾಗಿದೆ.
ತಾಲೂಕು ಆಡಳಿತ ಗಣೇಶೋತ್ಸವ ಸಮಿತಿಗಳಿಗೆ ಕೆಲವು ಸೂಚನೆ ಕೊಟ್ಟಿದ್ದು ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆಯೂ ತಿಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭಟ್ಕಳದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಖರೀದಿ ಭರಾಟೆ ಜೋರಾಗಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.