ಶಿರಸಿ: ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಹಿರಿಯ ಗುತ್ತಿಗೆದಾರ ಗಣೇಶ ದಾವಣಗೆರೆ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಂತರ ₹50 ಲಕ್ಷದೊಳಗಿನ ಕಾಮಗಾರಿಯನ್ನು ಹೊರ ತಾಲೂಕು ಹಾಗೂ ಹೊರ ಜಿಲ್ಲೆಯ ಗುತ್ತಿಗೆದಾರರು ಟೆಂಟರ್ ಹಾಕದಂತೆ ತೀರ್ಮಾನ ಕೈಗೊಳ್ಳಲಾಯಿತು.
ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶಿರಸಿ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.ಉಪಾಧ್ಯಕ್ಷರಾಗಿ ಬಾಲಚಂದ್ರ ಮೇಸ್ತ, ಪ್ರಧಾನ ಕಾರ್ಯದರ್ಶಿಯಾಗಿ ಅರವಿಂದ ತೆಲಗುಂದ, ಜಂಟಿ ಕಾರ್ಯದರ್ಶಿಯಾಗಿ ರಾಘವೇಂದ್ರ ಗಾಂವಕರ, ಖಜಾಂಚಿಯಾಗಿ ಗಣೇಶ ಆಚಾರಿ, ಆಡಳಿತ ಮಂಡಳಿಯ ಸದಸ್ಯರಾಗಿ ಅನಂತ ನಾಯ್ಕ, ಯೋಗೀಶ ಗಿರಿ, ಮಂಜುನಾಥ ನಾಯ್ಕ ಮಾಳಂಜಿ, ಮಧುಕರ ಬಿಲ್ಲವ, ನಿಸ್ಸಾರ ಅಹಮದ್, ಚಂದ್ರಕಾಂತ ಗೌಡ, ಮಾರುತಿ ಅಲಕುಂಟೆ, ಮುಕುಂದ ನಾಯ್ಕ, ಅರುಣ ಮೇಸ್ತ ಮಧುಸೂದನ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಜಿ.ಎಸ್.ಹಿರೇಮಠ, ಮುಂದಾಳತ್ವದಲ್ಲಿ ನಿಕಟಪೂರ್ವ ಅಧ್ಯಕ್ಷ ರಮೇಶ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಮಾಲತೇಶ ಬಿಳಗಲಿ ನೂತನ ಅಧ್ಯಕ್ಷ ಗಣೇಶ ದಾವಣಗೆರೆ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.ಸಭೆಯಲ್ಲಿ ಶಿರಸಿ ತಾಲೂಕಾ ಗುತ್ತಿಗೆದಾರರು ಉಪಸ್ಥಿತರಿದ್ದರು.
ಸಿವಿಲ್ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದು ಮತ್ತು ಅವರ ಸಮಸ್ಯೆಗೆ ಬೆನ್ನೆಲುಬಾಗಿ ನಿಲ್ಲುವುದು ನಮ್ಮ ಮೂಲ ಉದ್ದೇಶ. ಗುತ್ತಿಗೆದಾರರು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಸಂಘಟನೆಯ ಮೂಲಕ ಹಂತ ಹಂತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಶಿರಸಿ ಗುತ್ತಿಗೆದಾರರು ಹೊರಗೆ ತೆರಳಿ ಕಾಮಗಾರಿ ನಡೆಸುವುದು ಬಹಳ ಕಡಿಮೆ. ಆದರೆ, ಹಾವೇರಿ, ಹಾನಗಲ್, ಕುಮಟಾ, ಕಾರವಾರ ಸೇರಿದಂತೆ ಇನ್ನಿತರ ಭಾಗಗಳಿಂದ ಆಗಮಿಸಿ, ಶಿರಸಿ ತಾಲೂಕಿನಲ್ಲಿ ನಡೆಯುವ ಕಾಮಗಾರಿಗೆ ಟೆಂಡರ್ ಹಾಕುತ್ತಾರೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವಿಲ್ಲದಾಗಿದೆ. ₹50 ಲಕ್ಷ ಒಳಗಿನ ಕಾಮಗಾರಿ ಇಲ್ಲಿಯವರಿಗೆ ಸಿಗುವಂತೆ ನೋಡಿಕೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನುತ್ತಾರೆ ಗುತ್ತಿಗೆದಾರ ಹಾಗೂ ಕಾನೂನು ಸಲಹೆಗಾರ ಪ್ರದೀಪ ಶೆಟ್ಟಿ.