ಗಣೇಶ ವಿಸರ್ಜನೆ: ಮಹಿಳಾ ಕಾಂಗ್ರೆಸ್‌ನಿಂದ ವ್ಯಾಪಕ ಪ್ರಚಾರ

KannadaprabhaNewsNetwork |  
Published : Nov 22, 2025, 01:45 AM IST
೨೧ಕೆಎಂಎನ್‌ಡಿ-೩ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆಯುವ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಚ್.ಬಿ.ಶುಭದಾಯಿನಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಚಿಕ್ಕಮಂಡ್ಯ ಗ್ರಾಮದಲ್ಲಿ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಸುಮಾರು ೨೫೦ ಸ್ಕೂಟರ್‌ಗಳಲ್ಲಿ ಕೆರಗೋಡಿಗೆ ತೆರಳುವುದಕ್ಕೆ ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭಾನುವಾರ (ನ.೨೩)ರಂದು ಶ್ರೀ ಪಡುವಲ ಬಾಗಿಲು ಆಂಜನೇಯಸ್ವಾಮಿ ಸೇವಾ ಸಮಿತಿಯಿಂದ ಆಯೋಜಿಸಿರುವ ಗಣೇಶ ವಿಸರ್ಜನಾ ಕಾರ್ಯಕ್ರಮ ಪರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ನೇತೃತ್ವದಲ್ಲಿ ಚಿಕ್ಕಮಂಡ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ವ್ಯಾಪಕ ಪ್ರಚಾರ ನಡೆಸಿದರು.

ಗಣೇಶ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜನರಿಗೆ ಕರಪತ್ರಗಳನ್ನು ವಿತರಿಸುತ್ತಾ, ನಾವೆಲ್ಲಾ ಹಿಂದೂ- ನಾವೆಲ್ಲಾ ಒಂದು ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹಿಳೆಯರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಗೆ ಜಾತಿ, ಮತ ಬೇಧವಿಲ್ಲ. ಜಾತ್ಯತೀತ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸ್ವಂತಿಕೆಯನ್ನು ಮೆರೆಯಿತು. ಆದರೆ, ಜೆಡಿಎಸ್- ಬಿಜೆಪಿಗೆ ಸ್ವಂತಿಕೆ ಎಂಬುದೇ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಲಿದೆ ಎಂದು ಹೇಳುವ ಪ್ರಧಾನಿ ಮೋದಿ ಅವರು, ಬಿಹಾರದಲ್ಲಿ ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟು ಗೆದ್ದಿದ್ದಾರೆ ಎಂದು ಛೇಡಿಸಿದರು.

ನಾವೂ ಹಿಂದೂಗಳೇ. ನಮ್ಮಲ್ಲಿ ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಇದೆ. ಅದೇ ಪರಿಕಲ್ಪನೆಯೊಂದಿಗೆ ಗಣೇಶನನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ವಿಸರ್ಜನಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದೊಂದು ಭಾವೈಕ್ಯತೆ, ಸೌಹಾರ್ದತೆ ಮೂಡಿಸುವ ಕಾರ್ಯಕ್ರಮ. ಇದನ್ನು ಜಿಲ್ಲೆಯ ಎಲ್ಲಾ ಜನರು ಒಗ್ಗಟ್ಟಿನಿಂದ ಬೆಂಬಲಿಸಬೇಕು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಮಾದರಿಯನ್ನು ಮಂಡ್ಯ ಪರಿಚಯಿಸಬೇಕು ಎಂದು ಜನರಲ್ಲಿ ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಸುಮಾರು ೨೫೦ ಸ್ಕೂಟರ್‌ಗಳಲ್ಲಿ ಕೆರಗೋಡಿಗೆ ತೆರಳುವುದಕ್ಕೆ ನಿರ್ಧರಿಸಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಶಕ್ತಿ ಏನೆಂಬುದನ್ನು ತೋರ್ಪಡಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹನ್ಸಿಯಾಬಾನು, ಎಂ.ಎಸ್.ಜ್ಯೋತಿ, ರಾಧಾ ಚಿಕ್ಕಲಿಂಗೇಗೌಡ, ಗ್ಯಾರಂಟಿ ಸಮಿತಿಯ ಸದಸ್ಯ ಎಚ್.ಎಂ.ಉದಯಕುಮಾರ್ ಹಾಗೂ ಮಹಿಳಾ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

PREV

Recommended Stories

ಕೆಪಿಎಸ್‌ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಪ್ರತಿಭಟನೆ
ರೇಣುಕಾಂಬೆಯ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಸಂಪನ್ನ