ಅಣ್ಣೂರು ಸತೀಶ್
ಗೌರಿ- ಗಣೇಶಮೂರ್ತಿಗಳ ವ್ಯಾಪಾರದಲ್ಲಿ ಕುಸಿತ ಉಂಟಾಗಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಭಾರತೀನಗರ ವ್ಯಾಪ್ತಿ ದೊಡ್ಡ ದೊಡ್ಡ ಗಣಪಗಳನ್ನು ತಂದಿದ್ದ ಅಂಗಡಿ ಮಾಲೀಕರಿಗೆ ವ್ಯಾಪಾರವಾಗದೆ ಕಾದು ಕುಳಿತಿದ್ದರು. ಕೆಲವು ಅಂಗಡಿಗಳಲ್ಲಿ ಚಿಕ್ಕಚಿಕ್ಕ ಮಣ್ಣಿನ ಗಣಪ ಹಾಗೂ ಅಲಂಕಾರಿಕ ಗಣಪನನ್ನು ಮಾರಾಟ ಮಾಡುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಪರಿಸರ ಹಾನಿ ನಿರಂತರವಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ಗಣಪತಿಯನ್ನು ಮನೆಯಲ್ಲೇ ತಯಾರಿಸಬೇಕು ಅಥವಾ ಮಾರಾಟ ಮಾಡುವ ಅಂಗಡಿಯಲ್ಲಿ ತಂದು ಪ್ರತಿಷ್ಠಾಪಿಸಬೇಕು. ಜನತೆ ರಾಸಾಯನಿಕ ಮಿಶ್ರಿತ ಗಣಪತಿಯಿಂದ ದೂರ ಉಳಿದು ಪರಿಸರ ಸ್ನೇಹಿ ಗಣಪತಿ ಕೂರಿಸಬೇಕು.
ಕೆರೆ, ಕಟ್ಟೆ ಮತ್ತು ಬಾವಿಗಳಲ್ಲಿ ಗಣೇಶ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಂಡು ಜನ-ಜಾನುವಾರುಗಳಿಗೂ ಹಾನಿಯಾಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ಮನೆಯಲ್ಲೇ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಬೇಕೆಂಬುವುದು ಎಲ್ಲರ ಆಶಯವಾಗಿದೆ.
ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಗಣೇಶ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಜನರು ಗಣೇಶ ಹಬ್ಬವನ್ನು ಆಚರಿಸಲು ಪಟ್ಟಣಕ್ಕೆ ಆಗಮಿಸಿದ್ದರು. ದ್ವಿಚಕ್ರವಾಹನ ಸವಾರರು ಸ್ಥಳವಿಲ್ಲದೆ ರಸ್ತೆ ಬದಿಯಲ್ಲೇ ನಿಲ್ಲಿಸಿ ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು.
ಇಂದು ದೊಡ್ಡದೊಡ್ಡ ಗಣಪತಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ವ್ಯಾಪಾರಿಗಳಿಗೆ ದೊಡ್ಡಪೆಟ್ಟು ಬಿದ್ದಿದೆ ಎಂದು ವ್ಯಾಪಾರಿ ಚಿಕ್ಕರಸಿನಕೆರೆ ರಾಘು ತಿಳಿಸಿದರು.
ಜನತೆ ಬಣ್ಣದ ಗಣೇಶನ ವ್ಯಾಮೋಹಕ್ಕೆ ಒಳಗಾಗದೇ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವುದರಿಂದ ಪರಿಸರ ಸಂರಕ್ಷಿಸಿದಂತಾಗುತ್ತದೆ ಎಂದು ರೈತ ಟಿ.ಪಿ.ಅರುಣ್ ಕುಮಾರ್ ಮನವಿ ಮಾಡಿದರು.