ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿಯ ಪ್ರೊ.ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಲ್ಕು ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಗೆ ನಾಲ್ಕು ಮಂದಿ ಅರ್ಹ ಅಭ್ಯರ್ಥಿಗಳು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ನಾಲ್ವರು ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಗುರುವಾರ ಘೋಷಿಸಿದರು.
ನಾಲ್ಕು ಸ್ಥಾನಗಳಿಗೆ ಸಲ್ಲಿಸಿದ್ದ 5 ನಾಮಪತ್ರಗಳ ಅಂತಿಮ ಪರಿಶೀಲನೆಯನ್ನು ವಿಶಾಲಾಕ್ಷಿ ಅವರು ಮಂಗಳವಾರ ನಡೆಸಿದ್ದರು. ಈ ವೇಳೆ ಸ್ವತಂತ್ರ ಅಭ್ಯರ್ಥಿ ಭೋಜರಾಜ ಸೋಮಯ್ಯ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತ್ತು. ಒಂದು ಸ್ಥಾನಕ್ಕೆ 45 ಮತಗಳ ಅಗತ್ಯವಿತ್ತು. ಇದರ ನಡುವೆ ಜೂ.11ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ನಿಗದಿತ ವೇಳಾಪಟ್ಟಿ ಪ್ರಕಾರ ಜೂ.18 ರಂದು ಮತದಾನ ನಡೆದು ಅಂದೇ ಮತ ಎಣಿಕೆ ಮಾಡಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಬೇಕಾಗಿತ್ತು.
ಜೂ.11ರಂದು ಗುರುವಾರ ಯಾರೂ ನಾಮಪತ್ರ ಹಿಂಪಡೆದಿರಲಿಲ್ಲ. ಜತೆಗೆ ನಾಲ್ಕು ಸ್ಥಾನಗಳಿಗೆ ನಾಲ್ಕು ಮಂದಿ ಅರ್ಹರು ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.
ಜೂ.25ಕ್ಕೆ ಅವಧಿ ಮುಗಿಯುತ್ತಿದ್ದ ರಾಜ್ಯಸಭೆ ಸದಸ್ಯರಾದ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ, ಎಚ್.ಡಿ. ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ನೂತನ ಸದಸ್ಯರ ಪಟ್ಟಿಯನ್ನು ವಿಶಾಲಾಕ್ಷಿ ಅವರು ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರಿಗೆ ಕಳುಹಿಸಿಕೊಟ್ಟರು ಎಂದು ತಿಳಿದುಬಂದಿದೆ.
ಪ್ರಮಾಣಪತ್ರ ಪಡೆದ ಸದಸ್ಯರು:
ಅವಿರೋಧ ಆಯ್ಕೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ನ ಪವನ್ ಖೇರಾ, ಮನ್ಸೂರ್ ಅಲಿಖಾನ್ ಹಾಗೂ ಬಿಜೆಪಿಯ ಪ್ರೊ. ನಾಗರಾಜ್ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದರು.
ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿರುವ ಕಾರಣ ಬೆಂಗಳೂರಿಗೆ ವಾಪಸ್ ಆದ ಬಳಿಕ ಪ್ರಮಾಣ ಪತ್ರ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಕಲಿತು ಬರುತ್ತೇನೆ:
ರಾಜ್ಯಸಭೆಗೆ ನೂತನ ಸದಸ್ಯರಾಗಿ ಆಯ್ಕೆಯಾದ ಪವನ್ ಖೇರಾ ಮಾತನಾಡಿ, ಕರ್ನಾಟಕದಿಂದ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಕ್ಕೆ ಖುಷಿ ಇದೆ. ಕನ್ನಡ ಸುಂದರ ಭಾಷೆ, ಮುಂದೆ ನಾನು ಬರುವಾಗ ಕನ್ನಡ ಕಲಿತುಕೊಂಡು ಬರುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಮನ್ಸೂರು ಬೆಂಬಲಿಗರ ಸಂಭ್ರಮ:
ರಾಜ್ಯಸಭಾ ಸದಸ್ಯರಾಗಿ ಮನ್ಸೂರು ಅಲಿ ಖಾನ್ ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರು ಸಂಭ್ರಮ ವ್ಯಕ್ತಪಡಿಸಿದರು. ವಿಧಾನಸೌಧದ ಹೊರಗೆ ಪೋಸ್ಟರ್ ಹಿಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಮನ್ಸೂರ್, ಅವಕಾಶ ನೀಡಿದ ಹೈಕಮಾಂಡ್‌ಗೆ ಧನ್ಯವಾದ. ನಾನು ರಾಜ್ಯದ ಹಿತಾಸಕ್ತಿ ಪರವಾಗಿ ಕೆಲಸ ಮಾಡುತ್ತೇನೆ. ರಾಜ್ಯಸಭೆಯಲ್ಲಿ ರಾಜ್ಯದ ವಿಷಯಗಳ ಕುರಿತು ಧ್ವನಿ ಎತ್ತುವೆ ಎಂದರು.
