ಬಳ್ಳಾರಿ: ಗಣೇಶೋತ್ಸವ ಎಂದರೆ ಭಕ್ತಿ, ಸಂಭ್ರಮ, ಸಡಗರದ ಸಂಗಮ. ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜಿಸುವುದಷ್ಟೇ ಅಲ್ಲದೆ, ತಮ್ಮ ಕಲ್ಪನೆ, ಭಕ್ತಿ ಮತ್ತು ಸೃಜನಶೀಲತೆಗೆ ರೂಪ ನೀಡುವ ಮೂಲಕ ಗಣೇಶೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಪರಿಪಾಠವೂ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಬಾರಿಯೂ ಬಳ್ಳಾರಿ ನಗರದಲ್ಲಿ ಒಂದಕ್ಕಿಂತ ಒಂದು ಭಿನ್ನ ವಿನ್ಯಾಸದ ಗಣಪತಿ ಮೂರ್ತಿಗಳು ಹಾಗೂ ಅಲಂಕಾರಗಳು ಜನರ ಗಮನ ಸೆಳೆಯುತ್ತಿವೆ.
ಇಲ್ಲಿನ ಗಾಂಧಿ ಭವನದಲ್ಲಿ ಹಿಂದೂ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಿರುವ 47ನೇ ವರ್ಷದ ಮಹಾಗಣಪತಿ, ಮಹಾನಗರ ಪಾಲಿಕೆಯ ನೌಕರರ ಸಂಘದಿಂದ ನಿರ್ಮಿತ ಪರಿಸರ ಪ್ರೇಮಿ ಗಣೇಶ, ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಸೆಂಟನರಿ ಹಾಲ್‌ನಲ್ಲಿ ರಾಷ್ಟ್ರೀಯ ಭಜರಂಗ ದಳದಿಂದ ನಿರ್ಮಿಸಿರುವ ಹಿಂದೂ ಮಹಾಗಣಪತಿ, ಗಜಮುಖ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ನಿರ್ಮಿಸಿರುವ ಉಗ್ರ ನರಸಿಂಹ ಗಣಪತಿ, ಪಾರ್ವತಿನಗರದ ಎರಡನೇ ಲಿಂಕ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಗಣೇಶ, ತಾಳೂರು ರಸ್ತೆಯ ಶ್ರೀ ಬಾಲ ವಿನಾಯಕ ಮಿತ್ರ ಮಂಡಳಿಯ 42ನೇ ವರ್ಷದ ಗಣೋತ್ಸವದಲ್ಲಿ ಮರಗಳನ್ನು ಕಡಿದು ಪರಿಸರ ನಾಶ ಮಾಡದಂತೆ ತಡೆಯೊಡ್ಡುವ ಗಣಪಗಳು ಗಮನ ಸೆಳೆಯುತ್ತಿವೆ.
ವಿದ್ಯುತ್ ದೀಪಗಳ ಅಲಂಕಾರ: ಬಣ್ಣಬಣ್ಣದ ವಿದ್ಯುತ್ ದೀಪಗಳು, ಹೂವಿನ ಅಲಂಕಾರ ಮತ್ತು ವಿವಿಧ ಕಲಾಕೃತಿಗಳಿಂದ ಗಣಪತಿ ಮಂಟಪಗಳು ಕಂಗೊಳಿಸುತ್ತಿವೆ. ಸಂಜೆ ನಂತರ ವಿದ್ಯುತ್ ದೀಪಗಳ ಬೆಳಕಿನಲ್ಲಿ ಮಂಟಪಗಳ ಸೌಂದರ್ಯ ಮತ್ತಷ್ಟು ಹೆಚ್ಚುತ್ತಿದ್ದು, ಜನರು ಕುಟುಂಬ ಸಮೇತರಾಗಿ ದರ್ಶನಕ್ಕೆ ಬರುತ್ತಿದ್ದಾರೆ.ಧಾರ್ಮಿಕ ವಿಷಯಗಳ ಜತೆಗೆ ಇತಿಹಾಸ ಮತ್ತು ದೇಶಭಕ್ತಿಯ ಸಂದೇಶ ಸಾರುವ ರೀತಿಯಲ್ಲಿಯೂ ಗಣಪತಿ ಮಂಟಪ ಸಿದ್ಧಪಡಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಾದರಿ ಹಾಗೂ ಅವರ ಶೌರ್ಯ ಪ್ರತಿಬಿಂಬಿಸುವ ಅಲಂಕಾರಗಳು ಯುವಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ.
ಭಕ್ತಿಯ ಜತೆಗೆ ಸೃಜನಶೀಲತೆ: ಬಳ್ಳಾರಿಯಲ್ಲಿ ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಗಣಪತಿ ಮೂರ್ತಿಗಳ ಗಾತ್ರ, ವಿನ್ಯಾಸ ಮತ್ತು ಅಲಂಕಾರದಲ್ಲಿ ಹೊಸತನ ಕಂಡುಬರುತ್ತಿದೆ. ಈ ಬಾರಿ ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳು, ದೇವರ ರೂಪಗಳು ಹಾಗೂ ಐತಿಹಾಸಿಕ ವ್ಯಕ್ತಿಗಳ ಮಾದರಿಗಳನ್ನು ಗಣಪತಿ ಮಂಟಪಗಳ ಅಲಂಕಾರದಲ್ಲಿ ಬಳಸಿರುವುದು ಗಮನಾರ್ಹವಾಗಿದೆ.
ರಾತ್ರಿ ವೇಳೆ ವಿದ್ಯುತ್ ದೀಪಗಳ ಝಗಮಗ:ಹಗಲಿನಲ್ಲಿ ಸರಳವಾಗಿ ಕಾಣುವ ಗಣಪತಿ ಮಂಟಪಗಳು ರಾತ್ರಿ ವೇಳೆ ವಿದ್ಯುತ್ ದೀಪಗಳ ಝಗಮಗದಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿವೆ. ಬಣ್ಣಬಣ್ಣದ ಬೆಳಕಿನ ಅಲಂಕಾರ, ಹೂವಿನ ಅಲಂಕಾರ, ಧಾರ್ಮಿಕ ಚಿತ್ರಣ ಹಾಗೂ ವಿವಿಧ ಮಾದರಿಗಳು ಮಂಟಪಗಳ ಸೌಂದರ್ಯ ಹೆಚ್ಚಿಸಿವೆ.
ಗಣೇಶೋತ್ಸವದ ಹಿನ್ನೆಲೆ ಬಡಾವಣೆಗಳಲ್ಲಿ ನಿವಾಸಿಗಳ ನಡುವೆ ಒಗ್ಗಟ್ಟು ಹೆಚ್ಚಾಗಿದೆ. ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ಉತ್ಸವದ ಸಿದ್ಧತೆಯಲ್ಲಿ ಕೈಜೋಡಿಸಿದ್ದಾರೆ. ಮಂಟಪ ನಿರ್ಮಾಣ, ಅಲಂಕಾರ, ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆಯಲ್ಲಿ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.