ಕನ್ನಡಪ್ರಭ ವಾರ್ತೆ ಬೆಳಗಾವಿಕ್ರಿಕೆಟ್ ಆಡುವ ಸಮಯದಲ್ಲಿ ಯುವಕರ ನಡುವೆ ನಡೆದ ಜಗಳ ಎರಡು ಕೋಮುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಈ ಎರಡು ಗುಂಪುಗಳ ನಡುವಿನ ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 27 ಜನರ ವಿರುದ್ಧ ನಗರದ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10 ಜನರನ್ನು ಬಂಧಿಸಲಾಗಿದೆ.
ಈ ಘಟನೆಯಲ್ಲಿ ಯುವಕರು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಲವು ಮನೆಯ ಕಿಟಕಿಗಳು, ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅಲ್ಲದೆ ಪೊಲೀಸ್ ಪೇದೆ ಅಮರ ಎಂಬುವರು ಸೇರಿದಂತೆ ಕೆಲವರಿಗೆ ಕಲ್ಲಿನ ಏಟು ಬಿದ್ದಿದ್ದರಿಂದ 8 ಜನರನ್ನುತಕ್ಷಣ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಹಪುರ ಠಾಣೆಯ ಪೊಲೀಸರು ಅಳವಣ ಗಲ್ಲಿಗೆ ದೌಡಾಯಿಸಿ ಘರ್ಷಣೆಯಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಿದ್ದರಿಂದ ಅನಾಹುತ ತಪ್ಪಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಲಾಟೆಯಲ್ಲಿ ಭಾಗಿಯಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಪುರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ತಲ್ವಾರ್ ಪ್ರದರ್ಶನ ಹಾಗೂ ಕಲ್ಲು ತೂರಾಟ ಸಂಬಂಧ ಅನ್ಯಕೋಮಿನ 14 ಜನರ ವಿರುದ್ಧ ಹಾಗೂ ಕ್ರಿಕೆಟ್ ಆಡುವಾಗ ಚಂಡು ಮನೆ ಮುಂದೆ ಬಂದಿದಕ್ಕೆ ಮಕ್ಕಳ ಜತೆಗೆ ಜಗಳಮಾಡಿದ್ದಂತೆ ಹಿಂದು ಸಮುದಾಯ 13 ಜನರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149 ಅಡಿ ಪ್ರಕರಣ ದಾಖಲಾಗಿವೆ.
ಮುಂಜಾಗ್ರತ ಕ್ರಮವಾಗಿ ಘಟನಾ ಸ್ಥಳಲ್ಲಿ ಮೂರು ಕೆಎಸ್‌ಆರ್‌ಪಿ ತುಕುಡಿ, ಮೂರು ಪೊಲೀಸ್ ಇನಸ್ಪೆಕ್ಟರ ಸೇರಿದಂತೆ ಬಂದೂಬಸ್ತ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ನಗರ ವಿವಿಧ ಕಡೆಗಳಲ್ಲಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಸೇರಿದಂತೆ ಹೆಚ್ಚಿನ ಬಂದೋಬಸ್ತ ಕಲ್ಪಿಸಲಾಗಿದೆ.