ಬ್ಯಾಂಕ್‌ ದರೋಡೆ ಮಾಡಿದ್ದ ಗ್ಯಾಂಗ್‌ ಬಂಧನ

KannadaprabhaNewsNetwork |  
Published : Jun 27, 2025, 12:49 AM IST
ಕೆನರಾ ಬ್ಯಾಂಕ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅತಿದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಒಂದೇ ತಿಂಗಳಲ್ಲಿ ಭೇದಿಸಿರುವ ಜಿಲ್ಲಾ ಪೊಲೀಸರು ಸೂತ್ರದಾರ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸೇರಿ ಮೂವರನ್ನು ಪ್ರಆರೋಪಿಗಳನ್ನು ಬಂಧಿಸಿ 10.5 ಕೆಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರು ವಶಪಡಿಸಿಕೊಂಡಿದ್ದಾರೆ.ಘಟನೆ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು, ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮೇ 23ರಂದು ನಡೆದಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು 8 ತಂಡ ರಚಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅತಿದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಒಂದೇ ತಿಂಗಳಲ್ಲಿ ಭೇದಿಸಿರುವ ಜಿಲ್ಲಾ ಪೊಲೀಸರು ಸೂತ್ರದಾರ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸೇರಿ ಮೂವರನ್ನು ಪ್ರಆರೋಪಿಗಳನ್ನು ಬಂಧಿಸಿ 10.5 ಕೆಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರು ವಶಪಡಿಸಿಕೊಂಡಿದ್ದಾರೆ.ಘಟನೆ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು, ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮೇ 23ರಂದು ನಡೆದಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು 8 ತಂಡ ರಚಿಸಲಾಗಿತ್ತು. ನಿರಂತರ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಪ್ರಕರಣ ಭೇದಿಸಿದ್ದು, ಪ್ರಮುಖ ಮೂವರು ಆರೋಪಿಗಳಾದ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಕುಮಾರ ಮಿರಿಯಾಲ್‌, ಚಂದ್ರಶೇಖರ ನೆರೆಲ್ಲಾ, ಸುನೀಲ ಮೋಕಾ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಕಾರು ಹಾಗೂ ಸಾಗಣೆ ಮಾಡಿದ್ದ ಅಂದಾಜು ₹ 10.75 ಕೋಟಿ ಮೌಲ್ಯದ 10.5 ಕೆ.ಜಿ ಚಿನ್ನಾಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿತರು ಹಾಗೂ ಕಳುವಾದ ಸ್ವತ್ತುಗಳ ಪತ್ತೆ ಕಾರ್ಯ ಮುಂದುವರೆದಿದೆ. ಪ್ರಕರಣದ ಭೇದಿಸುವಲ್ಲಿ ಶ್ರಮಿಸಿದ ಪೊಲೀಸ್ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಎಸ್ಪಿ ಶ್ಲಾಘಿಸಿದರು.

ಘಟನೆಯ ಹಿನ್ನೆಲೆ:

ಮೇ 23ರಿಂದ 25ರ ಅವಧಿಯಲ್ಲಿ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ ಶಾಖೆಯ ಕಿಟಕಿಯ ಸರಳು ಕಟ್ ಮಾಡಿ ಒಳನುಗ್ಗಿದ್ದ ಕಳ್ಳರು ಬ್ಯಾಂಕಿನ ಸೇಫ್ ಲಾಕರ್ ರೂಮ್‌ನ ಗ್ರಿಲ್‌ನ ಸರಳು ತುಂಡರಿಸಿ ಲಾಕರ್‌ನಲ್ಲಿದ್ದ ಅಂದಾಜು ₹ 53.26 ಕೋಟಿ ಮೌಲ್ಯದ 58.97 ಕೆ.ಜಿ (58,976.94 ಗ್ರಾಂ.) ಚಿನ್ನಾಭರಣ ಹಾಗೂ ₹ 5.20 ಲಕ್ಷ ನಗದು ಸೇರಿ ಒಟ್ಟು ₹ 53.31 ಕೋಟಿ ಮೌಲ್ಯದ ಸ್ವತ್ತನ್ನು ದೋಚಿಕೊಂಡು ಪರಾರಿಯಾಗಿದ್ದರು. ತಮ್ಮ ಗುರುತು ಪತ್ತೆಯಾಗದಂತೆ ಬ್ಯಾಂಕಿನ ಸಿಸಿ ಕ್ಯಾಮೆರಾಗಳ ಎನ್.ವಿ.ಆರ್ ಸಹ ತೆಗೆದುಕೊಂಡು ಹೋಗಿದ್ದರು. ಮೇ 26ರಂದು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರ್‌ಸಿಬಿ ಗೆದ್ದಿದ್ದರೆ ಅಂದೇ ಕಳ್ಳತನ!

ಮೇ 23ಕ್ಕೆ ಆರ್‌ಸಿಬಿ ಕ್ರಿಕೆಟ್ ಮ್ಯಾಚ್ ಇತ್ತು. ಅಂದು ಆರ್‌ಸಿಬಿ ಗೆದ್ದರೆ ಜನರು ಪಟಾಕಿ ಸಿಡಿಸುತ್ತಾರೆ. ಅದೇ ಸದ್ದಿನಲ್ಲಿ ಬ್ಯಾಂಕ್ ಲೂಟಿ ಮಾಡಬೇಕು ಎಂದು ಪ್ಲ್ಯಾನ್‌ ಮಾಡಿದ್ದರು. ಆದರೆ ಅಂದು ಆರ್‌ಸಿಬಿ‌ ಸೋತಿದ್ದರಿಂದ ಸಾಧ್ಯ ಆಗಿರಲಿಲ್ಲ. ಹಾಗಾಗಿ ಮೇ 24ರಂದು ಪ್ಲ್ಯಾನ್ ಮಾಡಿ, ಸಿಸಿ ಕ್ಯಾಮೆರಾ ಡೈವರ್ಟ್ ಮಾಡಿ, ರಸ್ತೆಯಲ್ಲಿನ ಹೈಮಾಸ್ಟ್ ಲೈಟ್ ಕೇಬಲ್‌ ಕಟ್ ಮಾಡಿ, ಕಳ್ಳತನ ಮಾಡಿದ್ದರು.

ತನಿಖೆ ದಿಕ್ಕು ತಪ್ಪಿಸಿಸಲು ಕಳ್ಳರ ತಂತ್ರ:

ಪ್ರಕರಣದಲ್ಲಿ ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲೆಂದೇ ವ್ಯವಸ್ಥಿತವಾಗಿ ಒಳಸಂಚು ಮಾಡಿದ್ದರು. ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೆ, ತನಿಖೆಯ ದಿಕ್ಕು ತಪ್ಪಿಸಲು ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಕಳ್ಳತನಗಳ ಬಗ್ಗೆ ತಿಳಿದುಕೊಂಡಿದ್ದರು. ತಮಿಳುನಾಡು ಹಾಗೂ ಕೇರಳದಲ್ಲಿ ಬ್ಯಾಂಕ್ ಕಳ್ಳತನದಲ್ಲಿ ಮಾಡಿದಂತೆ ಬ್ಲಾಕ್ ಮ್ಯಾಜಿಕ್ (ಗೊಂಬೆ ಪೂಜೆ) ಮಾಡಿದ್ದಾರೆ. ಇದರಿಂದ ತಮಿಳುನಾಡು, ಕೇರಳದವರು ಬಂದು ಕಳ್ಳತನ ಮಾಡಿದ್ದಾರೆ ಎಂದು ಬಿಂಬಿಸಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾರೆ. ಅದರಂತೆ ಬ್ಲಾಕ್ ಮ್ಯಾಜಿಕ್‌ಗಾಗಿ ಕುಂಕುಮ, ಅರಿಷಿಣ, ಖಾರದ ಪುಡಿ ಹಾಗೂ ಗೊಂಬೆ ಬಳಕೆ‌ ಮಾಡಿದ್ದಾರೆ.

ಪ್ರಕರಣದ ಪತ್ತೆ ಕುರಿತು ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ 8 ತಂಡಗಳನ್ನು ರಚಿಸಲಾಗಿತ್ತು. ಡಿಎಸ್‌ಪಿ ಗಳಾದ ಟಿ.ಎಸ್.ಸುಲ್ಪಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ ಹಾಗೂ ಸಿಪಿಐ ಗಳಾದ ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ ಮತ್ತು ಪಿಎಸ್‌ಐ ಗಳಾದ ಶ್ರೀಕಾಂತ ಕಾಂಬಳೆ, ಅಶೋಕ ನಾಯಕ, ದೇವರಾಜ ಉಳ್ಳಾಗಡ್ಡಿ, ಬಸವರಾಜ ತಿಪ್ಪರೆಡ್ಡಿ, ರಾಕೇಶ ಬಗಲಿ, ಸೊಮೇಶ ಗೆಜ್ಜಿ, ವಿನೋದ ದೊಡಮನಿ, ವಿನೋದ ಪೂಜಾರಿ, ಶಿವಾನಂದ ಪಾಟೀಲ, ಯತೀಶ.ಕೆ, ನಾಗರತ್ನ ಉಪ್ಪಲದಿನ್ನಿ ತಂಡಗಳನ್ನು ರಚಿಸಲಾಗಿದ್ದು, ಹಲವಾರು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಡಿವೈಎಸ್ಪಿಗಳಾದ ಸುನೀಲ‌ ಕಾಂಬಳೆ, ಬಾಲಪ್ಪ ನಂದಗಾವಿ, ಬಸವರಾಜ ಯಲಿಗಾರ ಉಪಸ್ಥಿತರಿದ್ದರು.

------

ಕೋಟ್‌:

ಕಳ್ಳರು ಪೊಲೀಸ್ ಇಲಾಖೆಯ ಕಣ್ತಪ್ಪಿಸಲು ಸಾಕಷ್ಟು ಪ್ಲ್ಯಾನ್ ಮಾಡಿದ್ದರೂ ನಾನು ಸೇರಿ ನಮ್ಮ ಪೊಲೀಸ್‌ ಅಧಿಕಾರಿಗಳು ಪ್ರಕರಣ ಭೇದಿಸಿದ್ದೇವೆ. ಪಿಸಿ ಯಿಂದ ಎಸ್ಪಿವರೆಗೆ ಎಲ್ಲರೂ ಒಂದು ತಿಂಗಳವರೆಗೂ ಶ್ರಮಿಸಿ ಯಶಸ್ಸು ಕಂಡಿದ್ದೇವೆ. ಮೇಲಧಿಕಾರಿಗಳು ಸಹ ಪೊಲೀಸ್ ಇಲಾಖೆ ಜಿಲ್ಲಾ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಗ್ರಾಹಕರು, ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರಿಯಾದ ಹಾಗೂ ಶೀಘ್ರ ತನಿಖೆ ಮಾಡಿ ಜನರ ನಂಬಿಕೆ ಉಳಿಸಿಕೊಂಡಿದ್ದೇವೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ

----------

ಬಾಕ್ಸ್

ಬೇಲಿಯೇ ಎದ್ದು ಕೃತ್ಯ ಎಸಗಿದೆ

ಈ ಮೊದಲು ಮನಗೂಳಿ ಶಾಖೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಆರೋಪಿ ವಿಜಯಕುಮಾರ ಮಿರಿಯಾಲ ಪ್ರಕರಣದ ಪ್ರಮುಖ ಸೂತ್ರಧಾರ. ತಾನು ವರ್ಗಾವಣೆ ಆಗುವುದನ್ನು ಖಚಿತ ಮಾಡಿಕೊಂಡಿದ್ದ ಆರೋಪಿ ಫೆಬ್ರುವರಿಯಲ್ಲಿಯೇ ಕಳ್ಳತನ ಪ್ಲ್ಯಾನ್‌ ಮಾಡಿದ್ದ. ಇದಕ್ಕಾಗಿ ಬ್ಯಾಂಕ್ ಹಾಗೂ ಲಾಕರ್ ಕೀಗಳನ್ನು ಡುಪ್ಲಿಕೇಟ್ ಮಾಡಿಸಿದ್ದ. ಮೇ 9ರಂದು ಕೊಲ್ಹಾರ ತಾಲೂಕಿನ ರೋಣಿಹಾಳಕ್ಕೆ ವರ್ಗಾವಣೆಯಾಗಿದ್ದ, ಬಳಿಕ ಪರಿಚಯಸ್ಥರ ಜೊತೆಗೂಡಿ ಕಳ್ಳತನ ಸಂಚು ರೂಪಿಸಿದ್ದ. ವರ್ಗಾವಣೆ ಆದ ಬಳಿಕ ಕಳ್ಳತನ ಆದರೆ ತನ್ನ ಮೇಲೆ ಯಾವುದೇ ಸಂಶಯ ಬದುವುದಿಲ್ಲ ಎಂದು ವಿಜಯಕುಮಾರ ನಂಬಿದ್ದ. ಕಳ್ಳತನಕ್ಕೂ ಮೊದಲು ಆರೋಪಿಗಳು ಹಲವಾರು ಬಾರಿ ಮನಗೂಳಿಗೆ ಬಂದು ಹೋಗಿದ್ದರು. ಬ್ಯಾಂಕಿಗೆ ಯಾವ ರೋಡ್‌ನಿಂದ ಬರಬೇಕು, ಹೇಗೆ ಹೊರಗೆ ಹೋಗಬೇಕು ಎಂಬುದನ್ನು ಸ್ಕೆಚ್‌ ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ