ಕನ್ನಡ ನೆಲ ಪ್ರಾಚೀನ ಕಾಲದಿಂದಲೂ ಸರ್ವಸಮಾನತೆಯನ್ನು ಸಾರಿದ ಪುಣ್ಯಭೂಮಿ: ಡಾ.ಚಂದ್ರಶೇಖರ ಕಂಬಾರ

KannadaprabhaNewsNetwork |  
Published : Jun 27, 2025, 12:49 AM IST
18 | Kannada Prabha

ಸಾರಾಂಶ

ಕನ್ನಡ ನೆಲ ಪ್ರಾಚೀನ ಕಾಲದಿಂದಲೂ ಸಾಹಿತ್ಯದೊಂದಿಗೆ ಸರ್ವಸಮಾನತೆ ಸಾರಿದ ಪುಣ್ಯಭೂಮಿ. ಕನ್ನಡ ಭಾಷೆಗೆ ಆಧಾರ ಸಹಿತವಾದ ಪ್ರಾಚೀನತೆ ಬಹಳ ಹಿಂದಿನಿಂದಲೂ ಇದೆ. ಕನ್ನಡೇತರ ಸಾಹಿತ್ಯದ ಕೃತಿಗಳಿಂದಲೂ ನಾಡಿನ ಇತಿಹಾಸದ ಕುರುಹುಗಳು ದೊರೆತಿರುವುದು ಕನ್ನಡ ಭಾಷೆಯ ಚರಿತ್ರೆಯನ್ನು ಬಲ್ಲವರಿಗೆ ತಿಳಿದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ನಾಡಿನ ಹಿರಿಮೆ ಗರಿಮೆಗಳ ಹಿಂದೆ ಐತಿಹಾಸಿಕ ಸತ್ಯಗಳು ಇವೆ. ಕನ್ನಡದ ಪೂರ್ವಾಚಾರ್ಯರು, ಪಂಡಿತರು, ವಿದ್ವಾಂಸರು ನಾಡಿನ ಸಾಂಸ್ಕೃತಿಕ, ಸಾಹಿತ್ಯಕ ಪರಂಪರೆಯ ಶ್ರೀಮಂತಿಕೆಯನ್ನು ಹಾಡಿ ಹೊಗಳಿದ್ದಾರೆ. ಇದು ಕನ್ನಡನಾಡಿಗೆ ಶ್ರೀಮಂತವಾದ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಹಿನ್ನೆಲೆ ಇರುವುದನ್ನು ಸಾಕ್ಷೀಕರಿಸುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕವಿರಾಜಮಾರ್ಗ- ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಎಂಬ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನೆಲ ಪ್ರಾಚೀನ ಕಾಲದಿಂದಲೂ ಸಾಹಿತ್ಯದೊಂದಿಗೆ ಸರ್ವಸಮಾನತೆ ಸಾರಿದ ಪುಣ್ಯಭೂಮಿ. ಕನ್ನಡ ಭಾಷೆಗೆ ಆಧಾರ ಸಹಿತವಾದ ಪ್ರಾಚೀನತೆ ಬಹಳ ಹಿಂದಿನಿಂದಲೂ ಇದೆ. ಕನ್ನಡೇತರ ಸಾಹಿತ್ಯದ ಕೃತಿಗಳಿಂದಲೂ ನಾಡಿನ ಇತಿಹಾಸದ ಕುರುಹುಗಳು ದೊರೆತಿರುವುದು ಕನ್ನಡ ಭಾಷೆಯ ಚರಿತ್ರೆಯನ್ನು ಬಲ್ಲವರಿಗೆ ತಿಳಿದಿದೆ. ನಮ್ಮ ನಾಡಿನ ಶ್ರೀಮಂತ ಪರಂಪರೆಯನ್ನು ನಮ್ಮ ಪುರಾಣ ಕಾವ್ಯಗಳು ಪ್ರಸ್ತಾಪಿಸಿರುವುದು ಇದಕ್ಕೆ ಸಾಕ್ಷಿ ಎಂದರು.

ಮಹಾಭಾರತ, ಗ್ರೀಕ್ ಸಾಹಿತ್ಯಗಳಲ್ಲಿಯೂ ಈ ಭಾಷೆಯ ಕುರಿತ ಕುರುಹುಗಳು ನಮ್ಮ ಭಾಷೆಯ ಬಗೆಗೆ ನಾವು ಹೆಮ್ಮೆಪಡುವಂತೆ ಮಾಡಿವೆ ಎಂದು ಅವರು ನುಡಿದರು.

ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಈ ರೀತಿಯ ವಿಚಾರ ಸಂಕಿರಣ ನಾಡಿನ ವಿದ್ಯಾರ್ಥಿ ಸಮುದಾಯಕ್ಕೆ ತುಂಬಾ ಉಪಯುಕ್ತವಾದವು. ಕನ್ನಡ ಸಾಹಿತ್ಯ ಎಲ್ಲಾ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ತನ್ನ ಅಭೂತಪೂರ್ವ ಸಾಧನೆ ಮಾಡಿದೆ. ಜಗತ್ತಿನ ಪ್ರಮುಖ ಭಾಷೆಗಳ ಸಾಲಿನಲ್ಲಿ ಕನ್ನಡವು ಒಂದಾಗಿದೆ ಎಂದರು.

ನಮ್ಮ ಸಾಹಿತ್ಯದ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಪುನರ್ ಮನನವು ಬಹಳ ಮುಖ್ಯವಾದುದು. ಕವಿರಾಜಮಾರ್ಗದ ಅಧ್ಯಯನ ಮತ್ತು ಓದಿನಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಶಾಲತೆಯನ್ನು ಅರಿಯಬಹುದು. ಕಾಲೇಜುಗಳು ಹಳೆಗನ್ನಡ ಸಾಹಿತ್ಯ ಕುರಿತು ವಿಚಾರ ಸಂಕಿರಣ ನಡೆಸುತ್ತಿರುವುದು ಪ್ರಶಂಸನೀಯ. ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ನುಡಿದರು.

ಅಧ್ಯಕ್ಷತೆವಹಿಸಿದ್ದ ಡಾ. ಪ್ರಧಾನ್ ಗುರುದತ್ತ ಮಾತನಾಡಿ, ಇಂತಹ ವಿಚಾರ ಸಂಕಿರಣಗಳು ಒಂದು ಅರ್ಥದಲ್ಲಿ ಉದಾತ್ತ ಅಧ್ಯಯನ. ಕವಿರಾಜಮಾರ್ಗವು ನಾಡಿನ ಪ್ರಾಚೀನ ಇತಿಹಾಸವನ್ನು ಕನ್ನಡಿಗರ ಹಾಗೂ ಕನ್ನಡ ನಾಡಿನ ವೈಶಿಷ್ಟ್ಯವನ್ನು ಬಿಂಬಿಸುವ ಮೌಲಿಕ ಕೃತಿಯಾಗಿದೆ. ಇದನ್ನು ಕೇವಲ ಅಲಂಕಾರ ಗ್ರಂಥವೆಂದಾಗಲೀ, ಶಾಸ್ತ್ರಕೃತಿ ಎಂದಾಗಲಿ ಗಣಿಸಲು ಸಾಧ್ಯವಿಲ್ಲ. ಇದು ಧರ್ಮ ಸಮನ್ವಯತೆ, ಪರಧರ್ಮ ಸಹಿಷ್ಣುತೆ, ಪರರ ವಿಚಾರಗಳಿಗೆ ಸ್ಪಂದಿಸುವ ಸೌಜನ್ಯಶೀಲತೆಯನ್ನು ಕೂಡ ತಿಳಿಸುತ್ತದೆ ಎಂದರು.

ಅಲ್ಲದೆ ಈ ಕೃತಿಯಲ್ಲಿ ಭಾಷಾ ವಿಜ್ಞಾನದ ಕುರುಹುಗಳು, ತಿರುಳ್ಗನ್ನಡ ಸೀಮೆಯ ಕುರಿತ ಪ್ರಸ್ತಾಪ, ಶಬ್ದ ಅರ್ಥಗಳ ಗ್ರಹಿಕೆ ಎಲ್ಲವೂ ಪ್ರಸ್ತಾಪವಾಗಿವೆ. ಅಲಂಕಾರ ಮತ್ತು ಶಾಸ್ತ್ರ ವಿಚಾರಗಳ ಜೊತೆ ಸಾಹಿತ್ಯದ ವಿಚಾರಗಳ ಸಮನ್ವಯವು ಸೂಕ್ಷ್ಮವಾಗಿ ಗ್ರಂಥವನ್ನು ಅಧ್ಯಯನ ಮಾಡಿದರೆ ಅರಿವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಮಾತನಾಡಿ, ಸಾಹಿತ್ಯದ ಮೂಲ ಪ್ರೇರಣೆಯನ್ನು ನಾಡಿನ ಸಾಹಿತ್ಯದ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಅರಿಯಬೇಕಾದ ಅನಿವಾರ್ಯತೆ ಇರುವುದರಿಂದ ಪ್ರಸ್ತುತ ಕಾಲಮಾನದಲ್ಲಿ ಇಂತಹ ವಿಚಾರ ಸಂಕಿರಣಗಳು ಅರ್ಥರ್ಪೂರ್ಣ ಎನಿಸುತ್ತವೆ. ಕವಿರಾಜಮಾರ್ಗಕಾರ ಒಂದು ಅರ್ಥದಲ್ಲಿ ಕನ್ನಡ ಸಾಹಿತ್ಯದ ಇತಿಹಾಸವನ್ನು ಆರಂಭಿಕವಾಗಿ ಗುರುತಿಸಿದ ಶಾಸ್ತ್ರಕಾರ. ಆತನ ದೇಶೀಯತೆ, ಕನ್ನಡಿಗರ ಸಹೃದಯತೆ ಕುರಿತ ಅವನ ದೃಷ್ಟಿಕೋನಗಳು, ಕನ್ನಡನಾಡಿನ ಭೌಗೋಳಿಕ ವ್ಯಾಪ್ತಿ ಬಗೆಗಿನ ಅವನ ನಿಲುವು ಈ ಎಲ್ಲವೂ ಅವನ ಕೃತಿಯನ್ನು ನಾವು ಹೆಮ್ಮೆಯ ಪ್ರತೀಕವೆಂದು ನೋಡುವಂತೆ ಮಾಡಿವೆ ಎಂದು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ವಂದಿಸಿದರು. ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಮತ್ತು ಕನ್ನಡ ಸ್ನಾತಕೋತ್ತರ ವಿಭಾಗದ ಅಧ್ಯಾಪಕ ಡಾ.ಬಿ. ಪ್ರಭುಸ್ವಾಮಿ ನಿರೂಪಿಸಿದರು. ಸುಶ್ಮಿತಾ ಮತ್ತು ತಂಡದವರು ಪ್ರಾಾರ್ಥಿಸಿದರು.

ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಸುದೀಪ್‌ ಇದ್ದರು.

ಉದ್ಘಾಟನೆ ಬಳಿಕ ನಡೆದ ಗೋಷ್ಠಿಗಳಲ್ಲಿ ಸಹ ಪ್ರಾಧ್ಯಾಪಕ ಜಯಶಂಕರ ಹಲಗೂರು ಅವರು ಕವಿರಾಜಮಾರ್ಗ-ಕನ್ನಡ ವಿಷಯವಾಗಿ ಪ್ರೊ.ಸಿ.ಪಿ. ಸಿದ್ಧಾಶ್ರಮ ಅವರ ಅಧ್ಯಕ್ಷತೆಯಲ್ಲಿ, ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲನಮೂಲೆ ಅವರು ಕವಿರಾಜಮಾರ್ಗ-ಕನ್ನಡಿಗ ವಿಷಯವಾಗಿ ಡಾ.ಎಂ.ಜಿ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ, ಪ್ರಾಧ್ಯಾಪಕಿ ಡಾ.ಎಸ್.ಡಿ. ಶಶಿಕಲಾ ಅವರು ಕವಿರಾಜಮಾರ್ಗ-ಕರ್ನಾಟಕ ಎಂಬ ವಿಷಯವಾಗಿ ಪ್ರಾಧ್ಯಾಪಕಿ ಡಾ. ಕವಿತಾ ರೈ ಅವರ ಅಧ್ಯಕ್ಷತೆಯಲ್ಲಿ ವಿಚಾರ ಮಂಡಿಸಿದರು.

ಪ್ರಬಂಧ ಮಂಡನಾ ಗೋಷ್ಠಿಯು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಚ್.ಟಿ. ಶೈಲಜಾ ಅವರು ಪ್ರಬಂಧ ಮಂಡನಾ ಗೋಷ್ಠಿಯ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ಸಂಶೋಧಕರು ಪ್ರಬಂಧಗಳನ್ನು ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ