ನೀರಿಗಾಗಿ ಹಂಬಲಿಸಿದ ಜನರಿಗೆ ಗಂಗೆ ಬಂದಿದ್ದಾಳೆ

KannadaprabhaNewsNetwork | Published : Oct 24, 2024 12:31 AM

ಸಾರಾಂಶ

ಪುರುಷರ ಪ್ರಯತ್ನ, ದೈವೀಕೃಪೆ ಫಲವಾಗಿ ಅವಳಿ ಯೋಜನೆಯ ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯಂತೆ ತುಂಬಿ ಹರಿಯುತ್ತಿವೆ. ಇದಕ್ಕೆ ತುಪ್ಪದಹಳ್ಳಿಯ ಕೆರೆ ಸಹ ಹಳ್ಳದ ರೀತಿ ಈಗ ಹರಿಯದೇ ನದಿಯಂತೆ ಹರಿಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ. ನೀರಿಗಾಗಿ ಹಂಬಲಿಸಿದ ಜನರಿಗೆ ಜಲಧಾರೆಯಾಗಿ ಗಂಗೆ ಬಂದಿದ್ದಾಳೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಜಗಳೂರಲ್ಲಿ ಬಣ್ಣಿಸಿದ್ದಾರೆ.

- ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ- - - ಕನ್ನಡಪ್ರಭ ವಾರ್ತೆ ಜಗಳೂರು

ಪುರುಷರ ಪ್ರಯತ್ನ, ದೈವೀಕೃಪೆ ಫಲವಾಗಿ ಅವಳಿ ಯೋಜನೆಯ ಜಗಳೂರು ಕ್ಷೇತ್ರದ 57 ಕೆರೆಗಳು, ಭರಮಸಾಗರದ ವ್ಯಾಪ್ತಿಯ ಕೆರೆಗಳು ನದಿಯಂತೆ ತುಂಬಿ ಹರಿಯುತ್ತಿವೆ. ಇದಕ್ಕೆ ತುಪ್ಪದಹಳ್ಳಿಯ ಕೆರೆ ಸಹ ಹಳ್ಳದ ರೀತಿ ಈಗ ಹರಿಯದೇ ನದಿಯಂತೆ ಹರಿಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ. ನೀರಿಗಾಗಿ ಹಂಬಲಿಸಿದ ಜನರಿಗೆ ಜಲಧಾರೆಯಾಗಿ ಗಂಗೆ ಬಂದಿದ್ದಾಳೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ಕೆರೆಗೆ ಬಾಗಿನ ಅರ್ಪಿಸಿದ ನಂತರ, ನಡೆದ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. ಶಾಂತಿವನ ಕೋಡಿ ಬಿದ್ದರೆ, ಭರಮಸಾಗರ ಕೆರೆ, ಭರಮಸಾಗರ ಕೆರೆ ತುಂಬಿದರೆ, ತುಪ್ಪದಹಳ್ಳಿಕೆರೆ, ತುಪ್ಪದಹಳ್ಳಿ ಕೆರೆ ತುಂಬಿದ ನಂತರ ಜಗಳೂರಿನಿಂದ ಹರಪನಹಳ್ಳಿ ತಾಲೂಕಿನ ಮಾರ್ಗದಿಂದ ಡಿ.ಬಿ.ಡ್ಯಾಂಗೆ ನೀರು ಹರಿದುಹೋಗುತ್ತಿದೆ ಎಂದರು.

ದಾವಣಗೆರೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹೊಸ ಪೈಪ್‌ಲೈನ್ ಯೋಜನೆಗೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲು ಸೂಚಿಸಿದ್ದೆ. ತಕ್ಷಣವೇ ಸಂಪೂರ್ಣ ಹಾಳಾಗಿದ್ದ ಹಲವು ಪೈಪ್‌ಗಳನ್ನು ತೆರವುಗೊಳಿಸಿ, ಅಲ್ಲಿ ತುರ್ತಾಗಿ ಹೊಸ ಪೈಪ್‌ಗಳನ್ನು ಅಳವಡಿಸಿ, ನೀರು ಹರಿಸಲು ತಿಳಿಸಲಾಗಿದೆ. ಜಗಳೂರು ಹಾಗೂ ಭರಮಸಾಗರದ ಎರಡು ಅವಳಿ ನೀರಾವರಿ ಯೋಜನೆಗಳಿಂದ ಬತ್ತಿರುವ ಕೆರೆಗಳಿಗೆ ಜಲಸಿರಿಯಾಗಿ ನೀರು ಬಂದಿದೆ ಎಂದರು. ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಜಗಳೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಈ ಮೂರೂ ಪಕ್ಷಗಳ ಸರ್ಕಾರಗಳು, ಕ್ಷೇತ್ರದ ಮೂವರು ಶಾಸಕರು ಕೆಲಸ ಮಾಡಿದ್ದಾರೆ. ಸಿರಿಗೆರೆ ಶ್ರೀ ಒಬ್ಬರೇ ನೇತೃತ್ವ ವಹಿಸಿದ್ದರ ಫಲವಾಗಿ 57 ಕೆರೆಗಳಿಗೆ ತುಂಗ, ಭದ್ರೆಯಿಂದ ನೀರು ಬಂದಿದೆ. ರೈತರಾದ ನಾವುಗಳು ನೀರನ್ನು ಸದ್ಬಳಕೆ ಮಾಡಿಕೊಂಡು, ಬದುಕು ಬಂಗಾರ ಮಾಡಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, 22 ಕೆರೆಗಳ ರೀತಿ ಜಗಳೂರು ಕ್ಷೇತ್ರದ 57 ಕೆರೆಗಳಿಗೆ ನೀರು ಬರುವುದಿಲ್ಲ ಅಂದುಕೊಂಡಿದ್ದವು. ಆದರೆ, ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ ಮೂರೂ ಸರ್ಕಾರಗಳು, ಕ್ಷೇತ್ರದ ಎಸ್ .ವಿ. ರಾಮಚಂದ್ರ, ಶಾಸಕ ದೇವೇಂದ್ರಪ್ಪ ನಾನು ಸೇರಿದಂತೆ ಅಧಿಕಾರಿಗಳು, ಕೆಲಸ ನಿರ್ವಹಿಸಿದ ಪ್ರತಿಫಲವಾಗಿ ಎಲ್ಲಾ ಕೆರೆಗಳಿಗೆ ನೀರು ಬಂದಿದೆ ಎಂದರು.

ನೀರಾವರಿ ಇಲಾಖೆಯ ನಿವೃತ್ ಎಂ.ಡಿ. ಮಲ್ಲಿಕಾರ್ಜುನ್ ಗುಂಗಿ ಮಾತನಾಡಿದರು. ಬಾಗಿನ ಕಾರ್ಯಕ್ರಮ ಹಿನ್ನೆಲೆ ಸಿರಿಗೆರೆ ಶ್ರೀಗಳಿಗೆ ನೂರಾರು ಮಹಿಳೆಯರು ಕುಂಭಮೇಳದೊಂದಿಗೆ ಸ್ವಾಗತಿಸಿದರು. ಡೊಳ್ಳು, ಭಜನೆ ತಂಡಗಳೊಂದಿಗೆ ತುಪ್ಪದಹಳ್ಳಿ, ಹೆಮ್ಮನಬೇತೂರು, ಬಿಳಿಚೋಡು, ಅಸಗೋಡು, ಕುರುಡಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತರು ಶ್ರೀಗಳನ್ನು ಬರಮಾಡಿಕೊಂಡರು.

ಮುಖಂಡರಾದ ತುಪ್ಪದಹಳ್ಳಿವಕೀಲ ಬಸವರಾಜಪ್ಪ,ಶಿವಕುಮಾರ್, ಶಶಿ ಹೆಮ್ಮನಬೇತೂರು, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ನೀರಾವರಿ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳ ಮುಖಂಡರು, ರೈತರು ಪಾಲ್ಗೊಂಡಿದ್ದರು.

- - -

ಬಾಕ್ಸ್‌ * ಸಿರಿಗೆರೆ ಶ್ರೀ ಆಧುನಿಕ ಭಗೀರಥರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥರು. ಇಲ್ಲಿನ ರೈತರು ಹತ್ತಿ, ಮೆಕ್ಕೇಜೋಳ, ರಾಗಿ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಡಕೆ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಜಗಳೂರು ಬರದನಾಡು ಅಲ್ಲ, ಬಂಗಾರದ ನಾಡು, ಬಂಗಾರ ಬಿತ್ತಿ ಬೆಳೆ ಬೆಳೆಯುವ ಮೂಲಕ ದೊಡ್ಡ ಮಲೆನಾಡು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

- - - -22ಜೆಜಿಎಲ್1:

ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ಕೋಡಿ ಬಿದ್ದ ಹಿನ್ನೆಲೆ ಸಿರಿಗೆರೆಯ ತರಳಬಾಳು ಶ್ರೀಗಳು, ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

Share this article