ಪ್ರತಿ ವರ್ಷ ಒಂದಲ್ಲೊಂದು ರ‍್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಈ ಬಾರಿ ವೆಟರ್ನರಿ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿ ವರ್ಷ ಒಂದಲ್ಲೊಂದು ರ‍್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಈ ಬಾರಿ ವೆಟರ್ನರಿ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2025-26ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಗಂಗಾಧರ ಮುತ್ತಗಿ ವೆಟರ್ನರಿ ಸೈನ್ಸನಲ್ಲಿ (ಪ್ರಾ) 0.5 ರ‍್ಯಾಂಕ್ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ 3.5 ರ‍್ಯಾಂಕ್ ಪಡೆದುಕೊಂಡಿದ್ದಾನೆ.
ಈಚೆಗೆ ಪ್ರಕಟಗೊಂಡ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದಾಗಿ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸಾಧ್ಯವಾಗದೆ ತಡೆಹಿಡಿಯಲಾಗಿತ್ತು. ಅಂಥ ಸಂದರ್ಭದಲ್ಲಿ ಸ್ಪಾಟ್ ರ‍್ಯಾಂಕಿಂಗ್ ನೀಡುವ ಪ್ರತೀತಿ ಕೆಇಎ ಅಳವಡಿಸಿಕೊಂಡಿದ್ದು, ಅದರ ಆಧಾರದ ಮೇಲೆ ರ‍್ಯಾಂಕ್ ನೀಡಲಾಗಿದೆ. ಗಂಗಾಧರ ಮುತ್ತಗಿ 0.5 ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿಯೇ ಫಸ್ಟ್ ರ್‍ಯಾಂಕ್ ಗಿಂತಲೂ ಹೆಚ್ಚಿನ ರ‍್ಯಾಂಕ್ ಪಡೆದುಕೊಂಡಿದ್ದಾನೆ.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ ಕೌಲಗಿ ಸಂತಸ ಹಂಚಿಕೊಂಡು, ಕಳೆದ ಬಾರಿಯೂ ಸಹ ಅತ್ಯುತ್ತಮ ಫಲಿತಾಂಶ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಇಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದು ಸಂತಸ ತಂದಿದೆ. ಕಾಲೇಜು ಪ್ರಾರಂಭಗೊಂಡ ಮರು ವರ್ಷದಲ್ಲಿಯೇ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೀಡಿದ್ದ ನಮ್ಮ ಸಂಸ್ಥೆ ಈ ಬಾರಿಯೂ ಸಹ ಅಂತಹದೇ ಸಾಧನೆಗೆ ಸಾಕ್ಷಿಯಾಗಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಸ್ಪಾಟ್ ರ‍್ಯಾಂಕಿಂಗ್ ಮೂಲಕ 0.5 ರ‍್ಯಾಂಕ್ ಪಡೆದ ಈ ವಿದ್ಯಾರ್ಥಿ ವೆಟರ್ನರಿಯಲ್ಲಿ ರಾಜ್ಯಕ್ಕೆ ಫಸ್ಟ್ ಹಾಗೂ 3 ರ‍್ಯಾಂಕ್ ಮೂಲಕ ಬಿಎಸ್‌ಸಿ ಅಗ್ರಿಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಬಡತನದಲ್ಲಿ ಪ್ರತಿಭೆ ಅರಳುತ್ತದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾನೆ.
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹಿನ್ನೆಲೆಯಿಂದ ಬಂದ ಗಂಗಾಧರನಲ್ಲಿ ಉತ್ತಮ ಜ್ಞಾನವಿದೆ. ಅದರ ಪರಿಣಾಮವೇ ಈ ರ‍್ಯಾಂಕ್. ಮುಂದಿನ ದಿನಗಳಲ್ಲಿ ಈತ ಹೆಚ್ಚಿನ ಸಾಧನೆ ಮಾಡುವ ಮೂಲಕ ಕಲಿತ ಕಾಲೇಜಿಗೆ, ಹುಟ್ಟಿದ್ದ ಊರಿಗೆ ಕೀರ್ತಿ ತರುತ್ತಾನೆ ಎನ್ನುವ ವಿಶ್ವಾಸವಿದೆ. ಇನ್ನೂ ಹೆಚ್ಚಿನ ಸಾಧನೆ ಇವನಿಂದ ಬರಲಿ ಎಂದು ಹೇಳಿದರು.
ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ:
ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಬಡ ರೈತ ಕುಟುಂಬದ ಪ್ರತಿಭೆ ಗಂಗಾಧರ ಮುತ್ತಗಿ ಗಾರೆ ಕೆಲಸ ಮಾಡಿ ಕುಟುಂಬ ಸಾಗಿಸುವ ತಂದೆಯ ಶ್ರಮ, ರೈತನ ಬದುಕಿನ ಸಂಕಷ್ಟಗಳು ಹಾಗೂ ಮಗನ ಅಚಲ ಸಂಕಲ್ಪ ಒಂದಾಗಿ ಸಾಧನೆಯ ಶಿಖರವನ್ನು ತಲುಪಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ವಿದ್ಯಾರ್ಥಿಯ ಈ ಸಾಧನೆಗೆ ಮುಂದಿನ ಶೈಕ್ಷಣಿಕ ಜೀವನ ಮತ್ತಷ್ಟು ಯಶಸ್ಸು ಕೀರ್ತಿ ಹಾಗೂ ಸಾಧನೆಗಳಿಂದ ಕೂಡಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ, ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ), ಕರವೇ ತಾಲೂಕು ಅಧ್ಯಕ್ಷ ವಿಜಯಕುಮಾರ ಯಂಬತ್ನಾಳ ಸೇರಿದಂತೆ ಹಲವಾರು ಜನ ಮುಖಂಡರು ಈ ಯುವ ಪ್ರತಿಭೆಗೆ ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.