ಗಂಗಾಧರೇಶ್ವರ-ಹೊನ್ನಾದೇವಿ ಸಿಂಹವಾಹನೋತ್ಸವ

KannadaprabhaNewsNetwork | Published : Apr 29, 2024 1:32 AM
Follow Us

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಸಮೇತ ಹೊನ್ನಾದೇವಿ ಬ್ರಹ್ಮರಥೋತ್ಸವದ ಬಳಿಕ ಸಿಂಹವಾಹನೋತ್ಸವ ಮತ್ತು ಕುದುರೆ ಉತ್ಸವ ವಿಜೃಂಭಣೆಯಿಂದ ಶನಿವಾರ ರಾತ್ರಿ ಸುಸಂಪನ್ನವಾಯಿತು.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಸಮೇತ ಹೊನ್ನಾದೇವಿ ಬ್ರಹ್ಮರಥೋತ್ಸವದ ಬಳಿಕ ಸಿಂಹವಾಹನೋತ್ಸವ ಮತ್ತು ಕುದುರೆ ಉತ್ಸವ ವಿಜೃಂಭಣೆಯಿಂದ ಶನಿವಾರ ರಾತ್ರಿ ಸುಸಂಪನ್ನವಾಯಿತು.

ಉತ್ಸವದ ಮುಖ್ಯ ಆಯೋಜಕ ಎಡೇಹಳ್ಳಿ ತೀರ್ಥಪ್ರಸಾದ್ ಮಾತನಾಡಿ, ನಮ್ಮ ಕುಟುಂಬದ ಹಿರಿಯರಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುಂದುವರೆಸಿದ್ದೇವೆ. ಹಿಂದಿನ ಕಾಲದಲ್ಲಿ ಶ್ರದ್ಧಾಭಕ್ತಿ, ದಾಸೋಹಕ್ಕೆ ಮಹತ್ವವಿತ್ತು, ಯುವಕರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಉತ್ಸವ ನಡೆಸುತ್ತೇವೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್ ಮಾತನಾಡಿ, ನಮ್ಮ ಎಡೇಹಳ್ಳಿ ಕುಟುಂಬದಿಂದ ಕಳೆದ ನೂರಾರು ವರ್ಷಗಳಿಂದ ಹೂವಿನ ವಾಹನ ನಡೆದಿದೆ. ಸುತ್ತಮುತ್ತಲಿನ 30 ಹಳ್ಳಿಯಿಂದ 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ ಎಂದರು.

ಪುರಾತನ ಐತಿಹಾಸಿಕವಾಗಿರುವ ಈ ಉತ್ಸವ, ಎಡೇಹಳ್ಳಿಯ ದಿ.ಗಂಗಣ್ಣನವರು ಮತ್ತು ಕುಟುಂಬದವರ ವಾಹನ ಎಂದು ಜನಮಾನಸದಲ್ಲಿ ಪ್ರಸಿದ್ಧಿಯಾಗಿದೆ. ವಿಶೇಷವಾದ ಹೂವಿನ ಪಲ್ಲಕ್ಕಿ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಉತ್ಸವ ಕಂಗೊಳಿಸುತ್ತಿತ್ತು. ಸಂಗೀತ ರಸಸಂಜೆ, ಹೂವಿನ ಅಲಂಕಾರ, ಬಾಣ ಬಿರುಸು, ಮದ್ದಿನ ಮರ, ದೇವರಹೊಸಹಳ್ಳಿ ತಂಡದ ವೀರಗಾಸೆ, ಮಹಿಳಾ ತಂಡದ ವೀರಗಾಸೆ, ಕೀಲುಕುದುರೆ ನೃತ್ಯ, ನಾದಸ್ವರ, ತಮಟೆ ವಾದನ, ಜೊತೆಗೆ ತಮಿಳುನಾಡಿನ ತಂಜವೂರಿನ ಶ್ರೀ ಚಂದ್ರಶೇಖರ್ ವೃಂದದಿಂದ ಜೋಕ್ ಫಾಲ್ಸ್ ವೈಭವ ಮತ್ತು ಔಟುಗಳ ಸುಡುವಿಕೆ, ಬೃಹತ್ ಬೊಂಬೆಗಳ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಆಯೋಜಕರಾದ ಎಡೇಹಳ್ಳಿ ದಿ.ಗಂಗಣ್ಣನವರ ಕುಟುಂಬದವರಾದ ಸೋಂಪುರ ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥಪ್ರಸಾದ್, ಹೊನ್ನೇನಹಳ್ಳಿ ಲೋಕೇಶ್, ಉಮೇಶ್, ಮೆಡಿಕಲ್ ಶಶಿಧರ್, ಮರಿಯಪ್ಪಗೌಡ, ರೇಣುಕೇಶ್ವರ್, ನಟರಾಜು, ಕೆಂಚಪ್ಪ, ರವಿಕುಮಾರ್, ಮಾಗಡಯ್ಯ, ಜೀವನ್, ಗಂಗಾಧರಪ್ಪ, ಹರ್ಷ, ನಟರಾಜು, ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಗಂಗಶೆಟ್ಟಿ, ಪ್ರಧಾನ ಅರ್ಚಕರಾದ ಶ್ಯಾಂಪ್ರಸಾದ್ ದೀಕ್ಷಿತ್, ರಾಜು ದೀಕ್ಷಿತ್ ಉಪಸ್ಥಿತರಿದ್ದರು.ಪೋಟೋ 3 :

ದಕ್ಷಿಣಕಾಶಿ ಶಿವಗಂಗೆಯ ಹೊನ್ನಾದೇವಿ ಸಿಂಹವಾಹನೋತ್ಸವ ಮತ್ತು ಕುದುರೆ ಉತ್ಸವ ಎಡೇಹಳ್ಳಿ ಗಂಗಣ್ಣನವರ ಕುಟುಂಬದಿಂದ ವೈಭವವಾಗಿ ಸಂಪನ್ನಗೊಂಡಿತು.