ಗಂಗಾರತಿ ಮಾದರಿ ಕಾವೇರಿಗೆ ಕೊಡಗಿನಲ್ಲೇ ಆರತಿ: ರಿವರ್ ಟ್ರಸ್ಟ್‌ ಆಗ್ರಹ

KannadaprabhaNewsNetwork |  
Published : Jul 27, 2024, 12:52 AM IST

ಸಾರಾಂಶ

ವಾರಾಣಸಿಯ ಗಂಗಾ ಆರತಿಯ ಮಾದರಿಯಲ್ಲಿ ಜೀವನದಿ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮ ಮೂಲ ಕಾವೇರಿಯ ನಾಡು ಕೊಡಗಿನಲ್ಲಿ ಆಯೋಜಿಸುವಂತೆ ಕಾವೇರಿ ರಿವರ್ ಟ್ರಸ್ಟ್ ಮತ್ತು ಕಾವೇರಿ ಮಹಾ ಆರತಿ ಬಳಗ ಸರ್ಕಾರವನ್ನು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಆಗ್ರಹ ಮುಂದಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಾರಾಣಸಿಯ ಗಂಗಾ ಆರತಿಯ ಮಾದರಿಯಲ್ಲಿ ಜೀವನದಿ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮ ಮೂಲ ಕಾವೇರಿಯ ನಾಡು ಕೊಡಗಿನಲ್ಲಿ ಆಯೋಜಿಸುವಂತೆ ಕಾವೇರಿ ರಿವರ್ ಟ್ರಸ್ಟ್ ಮತ್ತು ಕಾವೇರಿ ಮಹಾ ಆರತಿ ಬಳಗ ಸರ್ಕಾರವನ್ನು ಒತ್ತಾಯಿಸಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿರುವುದು ಶ್ಲಾಘನೀಯ. ಇಂತಹ ಮಹತ್ವದ ಕಾರ್ಯವನ್ನು ಬೇರೆಲ್ಲೋ ನಡೆಸುವುದಕ್ಕಿಂತ ಕಾವೇರಿಯ ನಾಡು ಕೊಡಗಿನಲ್ಲಿ ನಡೆಸಿದಲ್ಲಿ ಅದಕ್ಕೊಂದು ಐತಿಹಾಸಿಕ, ಧಾರ್ಮಿಕ ಹಿನ್ನೆಲೆ ಇರುತ್ತದೆ ಎಂದರು.

ಕಾವೇರಿ ಆರತಿ ಕಾರ್ಯಕ್ರಮವನ್ನು ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ, ಸಂಗಮ ಕ್ಷೇತ್ರವಾದ ಭಾಗಮಂಡಲ, ನದಿ ಪಾತ್ರದ ಪವಿತ್ರ ಸ್ಥಳವಾದ ಕಣಿವೆ, ಬಲಮುರಿ, ಗುಹ್ಯ ಕ್ಷೇತ್ರಗಳಲ್ಲಿಯೂ ನಡೆಸಬಹುದಾಗಿದೆ. ಇಂತಹ ಸ್ಥಳಗಳಲ್ಲಿ ಕಾವೇರಿ ಆರತಿ ನಡೆಸಿದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಿದಂತೆ ಆಗುತ್ತದಲ್ಲದೆ, ಮೇಲ್ಪಂಕ್ತಿಯನ್ನು ಹಾಕಿಕೊಟ್ಟಂತಾಗುತ್ತದೆ ಎಂದರು.

ಕಾವೇರಿ ಆರತಿಯನ್ನು ಕೊಡಗಿನಲ್ಲಿ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಇಬ್ಬರು ಶಾಸಕರು, ಎಂಎಲ್‌ಸಿ ಅವರೊಂದಿಗೆ ಸಮಾಲೋಚಿಸಿ ಮುಖ್ಯ ಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಯನ್ನು ಸಂಪರ್ಕಿಸಿ, ಕೊಡಗಿನಲ್ಲಿ ಕಾವೇರಿ ಆರತಿ ಆಯೋಜನೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದರು.

ಕಾವೇರಿ ಮಹಾ ಆರತಿ ಬಳಗದಿಂದ ಕಳೆದ 14 ವರ್ಷಗಳ ಅವಧಿಯಲ್ಲಿ 161 ಬಾರಿ ಕಾವೇರಿಗೆ ಮಹಾ ಆರತಿ ಬೆಳಗಲಾಗಿದೆ. ಆ ಮೂಲಕ ಕಾವೇರಿಯ ಸಂರಕ್ಷಣೆಯ ಮಹತ್ವ, ನದಿ ನೀರಿನ ಸ್ವಚ್ಛತೆಯ ಸಂದೇಶವನ್ನು ಪಸರಿಸುವ ಪ್ರಯತ್ನಗಳನ್ನು ನಡೆಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಭಾಗಮಂಡಲದಿಂದ ರಾಮನಾಥಪುರದವರೆಗೆ 20 ಕಡೆಗಳಲ್ಲಿ ಏಕ ಕಾಲಕ್ಕೆ ಕಾವೇರಿಗೆ ಮಹಾ ಆರತಿಯನ್ನು ಬೆಳಗುವ ಕಾರ್ಯಕ್ರಮ ನಡೆಯುತ್ತಿದೆಯೆಂದು ತಿಳಿಸಿದರು.ಈ ಪ್ರಯತ್ನಕ್ಕೆ ಪೂರಕವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾವೇರಿ ಮಹಾ ಆರತಿ ತಂಡಗಳನ್ನು ರಚಿಸಲು ಮುಂದಾಗಿದ್ದು, ಈಗಾಗಲೆ 25 ತಂಡಗಳ ರಚನೆಯಾಗಿರುವುದಾಗಿ ತಿಳಿಸಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಮಂಡೇಪಂಡ ಬೋಸ್ ಮಂದಣ್ಣ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ಟ್‌ ಉಪಾಧ್ಯಕ್ಷ ಡಿ.ಆ‌ರ್.ಸೋಮಶೇಖ‌ರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!