ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ!

KannadaprabhaNewsNetwork |  
Published : Apr 22, 2026, 03:00 AM IST
ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ | Kannada Prabha

ಸಾರಾಂಶ

ರಾಜ್ಯದ ಏಕೈಕ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಸಂಗೀತ, ನೃತ್ಯ, ತಾಳವಾದ್ಯ ವಾರ್ಷಿಕ ವಿಶೇಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 14 ಸಾವಿರ ದಾಟಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಏಕೈಕ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಸಂಗೀತ, ನೃತ್ಯ, ತಾಳವಾದ್ಯ ವಾರ್ಷಿಕ ವಿಶೇಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 14 ಸಾವಿರ ದಾಟಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಈ ವಿವಿಗೆ ಹಸ್ತಾಂತರಗೊಂಡ ಬಳಿಕ ಇದು ಮೂರನೇ ವರ್ಷ ನಡೆಯುವ ಪರೀಕ್ಷೆಯಾಗಿದೆ.

ಈ ಬಾರಿ ಮೇ 10ರಿಂದ 25ರ ವರೆಗೆ ರಾಜ್ಯಾದ್ಯಂತ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ನಡೆಯಲಿದೆ. ರಾಜ್ಯದ 30 ಕೇಂದ್ರಗಳಲ್ಲಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದು ಗಮನಾರ್ಹ. ಅಂದರೆ ಕಳೆದ ಬಾರಿ 22 ಕೇಂದ್ರಗಳಲ್ಲಿ 12,500 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಬೆಂಗಳೂರಲ್ಲಿ ಗರಿಷ್ಠ ಸಂಖ್ಯೆ:

ಬೆಂಗಳೂರು ವಿಭಾಗದಲ್ಲೇ ಗರಿಷ್ಠ 6,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅಲ್ಲಿ 8-10 ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ಬಳಿಕ ಮೈಸೂರು ಹಾಗೂ ಮಂಗಳೂರು ವಿಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮೈಸೂರಿನಲ್ಲಿ ಮಾತ್ರ ಮೇ 20 ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.

ಮೇ 10 ರಂದು ಏಕಕಾಲದಲ್ಲಿ ಸಂಗೀತ, ನೃತ್ಯ, ತಾಳವಾದ್ಯಗಳ ಪೈಕಿ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ಅಂತಿಮ ಥಿಯರಿ ಪರೀಕ್ಷೆಗಳು ರಾಜ್ಯಾದ್ಯಂತ ಒಂದೇ ದಿನ ನಡೆಯಲಿದೆ.

ತಕ್ಷಣ ಮೌಲ್ಯಮಾಪನ:

ಪ್ರಾಕ್ಟಿಕಲ್‌ ಪರೀಕ್ಷೆಯ ಮೌಲ್ಯಮಾಪನ ಅಂದೇ ನಡೆಯಲಿದ್ದು, ಪರೀಕ್ಷೆ ಮುಗಿದಾಕ್ಷಣ ಅಂಕಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಆನ್‌ಲೈನ್‌ನಲ್ಲಿ ನಡೆಯಲಿದೆ. ಈ ಬಾರಿ 12 ಸಾವಿರ ವಿದ್ಯಾರ್ಥಿಗಳು ಜೂನಿಯರ್‌ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಜೂನಿಯರ್‌ ಮತ್ತು ಸೀನಿಯರ್‌ ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಆನ್‌ಲೈನ್‌ ಮೂಲಕ ನಡೆಯಲಿದೆ. ವಿದ್ವತ್‌ ಪೂರ್ವ ಮತ್ತು ವಿದ್ವತ್ ಅಂತಿಮ ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಮೈಸೂರಿನಲ್ಲೇ ನಡೆಯಲಿದೆ. ಜೂನ್‌ ಅಥವಾ ಜುಲೈ ಪ್ರಥಮ ವಾರದಲ್ಲಿ ಪರೀಕ್ಷಾ ಫಲಿತಾಂಶ ಹೊರಬೀಳುವ ನಿರೀಕ್ಷೆ ಹೊಂದಲಾಗಿದೆ.

ಮುಂದಿನ ವರ್ಷ ಪಠ್ಯ ಸಿದ್ಧ:

ನೃತ್ಯ ವಿಭಾಗದಲ್ಲಿ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಮತ್ತು ವಿದ್ವತ್‌ ಅಂತಿಮ ತರಗತಿಗಳ ಸಿಲೆಬಸ್‌ ಈ ಹಿಂದೆಯೇ ಸಿದ್ಧಗೊಂಡಿದೆ. ಅದರ ಆಧಾರದಲ್ಲೇ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಭರತನಾಟ್ಯ ಜೂನಿಯರ್‌ ವಿಭಾಗಕ್ಕೆ ಸಂಬಂಧಿಸಿ ಪಠ್ಯ ಪುಸ್ತಕವನ್ನು ವಿವಿಯೇ ಹೊರತರಲಿದೆ. ಇದು ಮುಂದಿನ ವರ್ಷ ವಿದ್ಯಾರ್ಥಿ ಹಾಗೂ ಶಿಕ್ಷಕರ ಕೈ ಸೇರಲಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಮಾನ್ಯತೆಯ ವಿವಿ ಅಂಕ ಪಟ್ಟಿ, ಉದ್ಯೋಗಕ್ಕೂ ಅನುಕೂಲ

ಡಾ.ಗಂಗೂಬಾಯಿ ಹಾನಗಲ್‌ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ವಿವಿ ಕಳೆದ ಎರಡು ವರ್ಷಗಳಿಂದ ಸಂಗೀತ, ನೃತ್ಯ, ತಾಳ ವಾದ್ಯಗಳ ವಿಶೇಷ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಕ್ಲಪ್ತ ಸಮಯದಲ್ಲಿ ಫಲಿತಾಂಶವನ್ನೂ ಪ್ರಕಟಿಸಿ ಎಲ್ಲರ ಮೆಚ್ಚುಗೆ ಪಡೆದಿದೆ. ಇದೇ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಇದು ಸರ್ಕಾರದ ಅಂಗೀಕೃತ ವಿವಿ ಆಗಿರುವುದರಿಂದ ಇಲ್ಲಿ ನಡೆಸುವ ಪ್ರತಿಯೊಂದು ಪರೀಕ್ಷೆಯ ಅಂಕ ಪಟ್ಟಿಗೂ ಮಾನ್ಯತೆ ಇದೆ. ಇದು ವಿದ್ಯಾರ್ಥಿಗಳ ಉದ್ಯೋಗಕ್ಕೂ ಉಪಯುಕ್ತವಾಗಲಿದೆ. ಈ ನಡುವೆ ಕೆಲವು ಖಾಸಗಿ ಸಂಸ್ಥೆಗಳು ಕೂಡ ಈ ಹೆಸರಿನಲ್ಲಿ ಪರೀಕ್ಷೆಗಳನ್ನು ಸಂಘಟಿಸುತ್ತಿದ್ದು, ಅಂತಹ ಸಂಸ್ಥೆಗಳ ಮಾನ್ಯತೆಯನ್ನು ಪರಿಶೀಲಿಸದೆ ವಿದ್ಯಾರ್ಥಿಗಳು, ಪೋಷಕರು ಹಾಗೂ ನೃತ್ಯ ಶಿಕ್ಷಕರು ಮೋಸ ಹೋಗಬಾರದು ಎನ್ನುತ್ತವೆ ವಿವಿ ಮೂಲಗಳು.

ಈ ಬಾರಿ ಒಂದೂವರೆ ಪಟ್ಟು ಅಧಿಕ ವಿದ್ಯಾರ್ಥಿಗಳು ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ನೋಂದಾಯಿಸಿದ್ದಾರೆ. ಎಲ್ಲ 30 ಕೇಂದ್ರಗಳಲ್ಲೂ ಮೇ 10 ರಿಂದ ಪರೀಕ್ಷೆಗಳು ಸುಸೂತ್ರವಾಗಿ ನಡೆಯುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಸಾಲಿನ ಪರೀಕ್ಷಾ ಮೌಲ್ಯಮಾಪಕರ ಭತ್ಯೆಯನ್ನು ಆನ್‌ಲೈನ್‌ ಮೂಲಕವೇ ಅವರವರ ಖಾತೆಗೆ ಜಮೆ ಮಾಡಲಾಗಿದೆ. ಜಮೆ ಆಗದೇ ಇದ್ದರೆ, ಅಂತಹವರು ವಿವಿಯನ್ನು ಸಂಪರ್ಕಿಸಲು ಅವಕಾಶ ಇದೆ.

-ಪ್ರೊ. ಎಂ.ಜಿ. ಮಂಜುನಾಥ್‌, ಪರೀಕ್ಷಾಂಗ ಕುಲಸಚಿವರುಈ ಬಾರಿ ಮೇ 10 ರಿಂದ 25ರ ವರೆಗೆ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ನಡೆಯಲಿದೆ. ಹಿಂದಿನಂತೆಯೇ ಡಿಜಿಟಲ್‌ ಮೌಲ್ಯಮಾಪನ ನಡೆಸಲಾಗುವುದು. ತ್ವರಿತ ಮೌಲ್ಯಮಾಪನಕ್ಕೆ ನೃತ್ಯ ಶಿಕ್ಷಕರು ಸಹಕಾರ ನೀಡಿದರೆ ಜೂನ್‌ ಅಂತ್ಯಕ್ಕೆ ಬೇಗನೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಲಿದೆ.

-ಪ್ರೊ.ರಾಮಕೃಷ್ಣಯ್ಯ ಕೆ., ಕುಲಪತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಬಸ್ ಸಂಚಾರಕ್ಕೆ ಸಚಿವರಿಂದ ಚಾಲನೆ
ಮೂವರು ಸಾಧಕರಿಗೆ ಗೌಡಾ ಪ್ರದಾನ