ಮಲೆನಾಡ ಅಪರಾಧ ಜಗತ್ತಲ್ಲಿ ಮತ್ತೆ ಗಾಂಜಾ ಘಾಟು

KannadaprabhaNewsNetwork |  
Published : Feb 26, 2026, 02:15 AM IST
ಗಾಂಜಾ  | Kannada Prabha

ಸಾರಾಂಶ

ಮಲೆನಾಡಿನ ಅಪರಾಧ ಜಗತ್ತಿನಲ್ಲಿ ಮತ್ತೊಮ್ಮೆ ಗಾಂಜಾ ಸದ್ದು ಮಾಡಿದೆ. ಇದುವರೆಗೆ ವಯಸ್ಕರು ಮಾಡುತ್ತಿದ್ದ ಕೊಲೆ, ಹಲ್ಲೆ, ದರೋಡೆ ಪ್ರಕರಣಗಳಲ್ಲಿ ಕೇಳಿ ಬರುತ್ತಿದ್ದ ಗಾಂಜಾ ಸದ್ದು ಇದೀಗ ಅಪ್ರಾಪ್ತರ ಅಪರಾಧ ಪ್ರಕರಣಗಳಲ್ಲಿ ಕೂಡ ಸದ್ದು ಮಾಡಲಾರಂಭಿಸಿದೆ.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡಿನ ಅಪರಾಧ ಜಗತ್ತಿನಲ್ಲಿ ಮತ್ತೊಮ್ಮೆ ಗಾಂಜಾ ಸದ್ದು ಮಾಡಿದೆ. ಇದುವರೆಗೆ ವಯಸ್ಕರು ಮಾಡುತ್ತಿದ್ದ ಕೊಲೆ, ಹಲ್ಲೆ, ದರೋಡೆ ಪ್ರಕರಣಗಳಲ್ಲಿ ಕೇಳಿ ಬರುತ್ತಿದ್ದ ಗಾಂಜಾ ಸದ್ದು ಇದೀಗ ಅಪ್ರಾಪ್ತರ ಅಪರಾಧ ಪ್ರಕರಣಗಳಲ್ಲಿ ಕೂಡ ಸದ್ದು ಮಾಡಲಾರಂಭಿಸಿದೆ.

ಸೋಮವಾರ ರಾತ್ರಿ ಸೂಳೆಬೈಲು ಅಥವಾ ಊರಗಡೂರು ಗ್ರಾಮದಲ್ಲಿ ನಡೆದ ವಿದ್ಯಾರ್ಥಿಗಳ ನಡುವಿನ ಗಲಾಟೆಯಲ್ಲಿ ಕೊಲೆಯೊಂದು ನಡೆದಿದ್ದು, ಈ ಪ್ರಕರಣದಲ್ಲಿನ ಆರೋಪಿಗಳಲ್ಲಿ ಒಬ್ಬ ಗಾಂಜಾ ಸೇವಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಹೊರ ಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ಗಾಬರಿ ಹುಟ್ಟಿಸಿದೆ. ಕೊಲೆಯಾದ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರೂ 15-16ರ ವಯಸ್ಸಿನ ಹರೆಯದ, ಅಪ್ರಾಪ್ತರೇ ಆಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇತ್ತೀಚೆಗೆ ಅನೇಕ ಅಪರಾಧ ಪ್ರಕರಣದಲ್ಲಿ ಆರೋಪಿಗಳು ಗಾಂಜಾ ಸೇವಿಸಿರುವುದು ಪತ್ತೆಯಾಗಿತ್ತು. ಗಾಂಜಾ ಅಮಲಿನಲ್ಲಿ ಹಲ್ಲೆ, ದರೋಡೆ, ಹೊಡೆದಾಟ ಮಾತ್ರವಲ್ಲದೆ, ಕೊಲೆಯಂತಹ ಪ್ರಕರಣಗಳಲ್ಲಿ ಕೂಡ ಗಾಂಜಾ ಸೇವನೆಯೇ ಕಾರಣವಾಗಿದೆ.

ಸಂಜೆಯಾಯಿತೆಂದರೆ ಕೆಲವು ರಸ್ತೆ ಮತ್ತು ಭಾಗಗಳಲ್ಲಿ ಸಂಚರಿಸುವುದೇ ಕಷ್ಟ ಎನ್ನುವಂತಹ ಸ್ಥಿತಿಯಿದೆ. ಚಿಕ್ಕಪುಟ್ಟ ಮಾತುಗಳೂ ಕೂಡ ಕೊನೆಗೆ ಜಗಳ, ಹೊಡೆದಾಟದಲ್ಲಿ ಕೊನೆಯಾಗುತ್ತಿದೆ. ಅಮಲಿನಲ್ಲಿ ಇರುವವರು ತಾವು ಏನು ಮಾಡುತ್ತಿದ್ದೇವೆ ಎಂಬ ಪರಿವೇ ಇಲ್ಲದೆ ಯಾವುದೇ ರೀತಿಯ ದಾಳಿಗೆ ಕೂಡ ಮುಂದಾಗುತ್ತಾರೆ. ಇದೆಲ್ಲದಕ್ಕೂ ಗಾಂಜಾ ಅಮಲು ಕಾರಣವಾಗಿದೆ. ಇದೇ ಕಾರಣಕ್ಕೆ ಸೂರ್ಯಾಸ್ತದ ಬಳಿಕ ಜನರು ಎಚ್ಚರಿಕೆಯಿಂದ ಇರುವುದನ್ನು ಕಲಿಯುತ್ತಿದ್ದಾರೆ. ಕಿರಿ ವಯಸ್ಸಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಹೆಲ್ಮೆಟ್ ಇಲ್ಲದೆ ನಿಯಮ ಮೀರಿದ ವೇಗದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವುದನ್ನು ನೋಡಿದರೆ ಭಯ ಹುಟ್ಟುತ್ತದೆ. ಪ್ರಶ್ನಿಸಿದರೆ ಇದೇನು ನಿಮ್ಮಪ್ಪನ ರಸ್ತೆಯಾ ಎಂದು ಮೈಮೇಲೆ ಜಗಳಕ್ಕೆ ಬರುತ್ತಾರೆ.

ವಿದ್ಯಾರ್ಥಿಗಳೂ ಗಾಂಜಾ ವ್ಯಸನಿಗಳಾಗುತ್ತಿರುವುದು, ಇದೊಂದು ವ್ಯವಸ್ಥಿತ ದಂಧೆಯಾಗಿ ರೂಪುಗೊಳ್ಳುತ್ತಿರುವ ಬಗ್ಗೆ ಕನ್ನಡಪ್ರಭ ಹಲವು ಲೇಖನಗಳ ಮೂಲಕ ಎಚ್ಚರಿಸಿದೆ. ಇದೇ ರೀತಿ ಜನಪ್ರತಿನಿಧಿಗಳು ಕೂಡ ಗಾಂಜಾ ಹೆಚ್ಚುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಲವು ಕಾಲೇಜು ಆವರಣ, ಸಮೀಪದ ಮೈದಾನಗಳು ಗಾಂಜಾ ಮಾರಾಟದ ಕೇಂದ್ರವಾಗುತ್ತಿದೆ.

ಊರಗಡೂರಿನಲ್ಲಿ ಕೊಲೆಯಾದ ವಿದ್ಯಾರ್ಥಿಯ ಸಹೋದರಿ ಕೂಡ ಮಾಧ್ಯಮಗಳ ಜೊತೆ ಮಾತನಾಡುತ್ತ, ನಿತ್ಯ ರಾತ್ರಿಯಾದರೆ ಇಲ್ಲಿ ಸುತ್ತಮುತ್ತ ಗಾಂಜಾ ವ್ಯಸನಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ಗಾಂಜಾ ಇರುವ ಸಿಗರೇಟು ವಾಸನೆ ತಡೆಯಲಾಗುತ್ತಿಲ್ಲ ಎಂದಿದ್ದಾರೆ.

ಶಿವಮೊಗ್ಗ ದಿನದಿಂದ ದಿನಕ್ಕೆ ಗಾಂಜಾ ನಗರವಾಗಿ ಬದಲಾಗುತ್ತಿದೆ. ಸಾಂಸ್ಕೃತಿಕ ನಗರಿ ಎಂದೇ ಖ್ಯಾತವಾದ ಶಿವಮೊಗ್ಗ ಗಾಂಜಾ ನಗರವಾಗುತ್ತಿದೆ. ಹೋರಾಟದ ನೆಲೆವೀಡು ಹೊಡೆದಾಟದ ಕೇಂದ್ರವಾಗುತ್ತಿದೆ. ಪೊಲೀಸರು ಕಠಿಣ ಕ್ರಮ ಜರುಗಿಸದಿದ್ದಲ್ಲಿ ಮುಂದಿನ ದಿನಗಳು ಇನ್ನಷ್ಟು ಭೀಕರವಾಗಲಿದೆ. ಸಾಮಾನ್ಯ ಜನರನ್ನು ಹೆದರಿಸುವ ಬದಲಿಗೆ ಕ್ರಿಮಿನಲ್‌, ಗಾಂಜಾ ಪೆಡ್ಲರ್‌ಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿ ಸಮಗ್ರ ಅಭಿವೃದ್ಧಿಗೆ ಸಿದ್ದು ಬಜೆಟ್‌ನಲ್ಲಿ ಹಣ ಕೊಡೋದು ಎಷ್ಟು?
ನುಗ್ಗೆ ಕೃಷಿಗೆ ಪ್ರತಿ ಹಂತದಲ್ಲೂ ಶುದ್ಧತೆ, ಗುಣಮಟ್ಟಕ್ಕೆ ಆದ್ಯತೆ ನೀಡಿ: ನುಗ್ಗೆ ಕೃಷಿಕ ಬ್ಯಾಲಿಹಾಳ ಬಸಯ್ಯ ಹಿರೇಮಠ