- ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದ ಪ್ರತಿಭಟನೆಯಲ್ಲಿ ಎಂ.ಆನಂದ ಆಕ್ರೋಶ
ಸಾರ್ವಜನಿಕ ಉದ್ಯಾನವನ ವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.
ನಗರದ ಹೊರವಲಯದ ಪಾಲಿಕೆ 41ನೇ ವಾರ್ಡ್‌ನ ರಿ.ಸ.ನಂ. 62ರ ನಿವೇಶನ ಸಂಖ್ಯೆ 154ರ ಸಾರ್ವಜನಿಕ ಉದ್ಯಾನವನವಿದೆ. ಆದರೆ, ಈಗ ಅದೇ ಉದ್ಯಾನ ವನದಲ್ಲಿ ಪಾಲಿಕೆ ಅಧಿಕಾರಿಗಳು ಏಕಾಏಕಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿ, ಬಿಜೆಪಿ ಜಿಲ್ಲಾ ಮುಖಂಡ ಎಂ.ಆನಂದ್ ಪ್ರತಿಭಟನೆಯಲ್ಲಿ ಮಾತನಾಡಿ, ಪಾಲಿಕೆಯ 41ನೇ ವಾರ್ಡ್‌ನ ಈ ಜಾಗವು ಸಾರ್ವಜನಿಕ ಉದ್ಯಾನವನವಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳ ಅವೈಜ್ಞಾನಿಕ ಯೋಜನೆ, ಆಲೋಚನೆಯಿಂದಾಗಿ ಎಸ್.ಎ. ರವೀಂದ್ರನಾಥ ನಗರದ ನಿವಾಸಿಗಳಿಗೆ ಹಾಗೂ ಇಂಡಸ್ಟ್ರಿಯಲ್ ಏರಿಯಾದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಇದೇ ಪಾರ್ಕ್ ಜಾಗದಲ್ಲಿ ಈ ಹಿಂದೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದೂ ನನೆಗುದಿಗೆ ಬಿದ್ದಿದೆ. ಇಂತಹ ಪ್ರಮುಖ, ಮುಖ್ಯ ಪ್ರದೇಶದಲ್ಲೇ ಕಸ ವಿಲೇವಾರಿ ಘಟಕ ಸ್ಥಾಪಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಮೊಂಡಾಟ ಕೈಬಿಟ್ಟು, ಸಾರ್ವಜನಿಕ ಉದ್ಯಾನವನ ಜಾಗವನ್ನು ಕಾಪಾಡಲಿ. ಪಾರ್ಕ್‌ಗೆ ಮೀಸಲಿಟ್ಟ ಜಾಗ ಅದೇ ಉದ್ದೇಶಕ್ಕೆ ಬಳಕೆ ಆಗಬೇಕೆಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಗೌರವಾಧ್ಯಕ್ಷ ಎಸ್.ಮಲ್ಲನಗೌಡ, ಅಧ್ಯಕ್ಷ ಎನ್.ಸಿದ್ದರಾಮಪ್ಪ, ಎಸ್.ಆರ್.ಸೋಮಶೇಖರಪ್ಪ, ಎನ್.ಎಸ್. ಮಹೇಶ್ವರಪ್ಪ, ಜಿ.ಕರಿಬಸಪ್ಪ, ಸಿ.ಕೆ.ಶಿವಪ್ಪ, ನೂರಾರು ನಿವಾಸಿಗಳು ಪಾಲ್ಗೊಂಡಿದ್ದರು.
- ಎಂ.ಆನಂದ್, ಬಿಜೆಪಿ ಮುಖಂಡ
ದಾವಣಗೆರೆ ಹೊರವಲಯದ ಎಸ್.ಎ.ರವೀಂದ್ರನಾಥ ನಗರದ ಪಾರ್ಕ್ ಜಾಗನಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವ ವಿಚಾರ ಕೈ ಬಿಡುವಂತೆ ಒತ್ತಾಯಿಸಿ ಮಂಗಳವಾರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಬಿಜೆಪಿ ಮುಖಂಡ ಎಂ.ಆನಂದ್ ನೇತೃತ್ವದಲ್ಲಿ ನಿವಾಸಿಗಳು, ಕಾರ್ಮಿಕರು ಪ್ರತಿಭಟಿಸಿದರು.