4 ಮಾದರಿಯಲ್ಲಿ ಕಸ ವಿಂಗಡಣೆ ಕಡ್ಡಾಯ

KannadaprabhaNewsNetwork |  
Published : Apr 20, 2026, 03:45 AM ISTUpdated : Apr 20, 2026, 07:19 AM IST
Garbage

ಸಾರಾಂಶ

ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರೂ ಕಡ್ಡಾಯವಾಗಿ ತ್ಯಾಜ್ಯವನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ನೀಡಬೇಕು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್‌) ಸೂಚನೆ ನೀಡಿದೆ.

 ಬೆಂಗಳೂರು :  ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರೂ ಕಡ್ಡಾಯವಾಗಿ ತ್ಯಾಜ್ಯವನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ನೀಡಬೇಕು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್‌) ಸೂಚನೆ ನೀಡಿದೆ.

‘ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026’ ಅನುಷ್ಠಾನಗೊಳಿಸಲು ನಗರದ ಪುರಭವನದಲ್ಲಿ ನಾಗರಿಕರು, ನಿವಾಸಿಗಳ ಕಲ್ಯಾಣ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಹೋಟೆಲ್ ಸಂಘಟನೆಗಳು ಹಾಗೂ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಈ ಸೂಚನೆ ನೀಡಲಾಗಿದ್ದು, ತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಹಾಗೂ ಮರುಬಳಕೆಯನ್ನು ಉತ್ತೇಜಿಸಲಿ ಹಸಿ, ಒಣ, ನೈರ್ಮಲ್ಯ ಮತ್ತು ವಿಶೇಷ ಕಾಳಜಿಯ ತ್ಯಾಜ್ಯ ಎಂದು ನಾಲ್ಕು ಭಾಗಗಳಲ್ಲಿ ಕಸವನ್ನು ವಿಂಗಡಿಸಬೇಕು ಎಂದು ಬಿಎಸ್‌ಡಬ್ಲ್ಯುಎಂಎಲ್‌ ಹೇಳಿದೆ.

ಕಾರ್ಯಾಗಾರದಲ್ಲಿ ಮಾತನಾಡಿದ ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ಅವರು, ನಗರದ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಕುರಿತು 5 ಪಾಲಿಕೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಭೆಗಳನ್ನು ನಡೆಸಿ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಶೀಘ್ರ ಹೊಸ ಪೋರ್ಟಲ್‌:

ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಮೇಲ್ವಿಚಾರಣೆ ಚುರುಕುಗೊಳಿಸಲು ಹೊಸ ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಈ ಮೂಲಕ ಘನ ತ್ಯಾಜ್ಯ ನಿರ್ವಹಣೆಯ ಮೂಲಸೌಕರ್ಯ ಮತ್ತು ದೈನಂದಿನ ಕಾರ್ಯಾಚರಣೆಗಳ ನಿಖರ ವರದಿಯನ್ನು ನಿರ್ವಹಿಸಲಾಗುತ್ತದೆ.ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ಜವಾಬ್ದಾರಿಯನ್ನು ಹೆಚ್ಚಿಸಲು ಮತ್ತು ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಲು ‘ವಿಸ್ತೃತ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿ’ ಎಂಬ ಹೊಸ ಹೊಣೆಗಾರಿಕಾ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕರೀಗೌಡ ತಿಳಿಸಿದರು.

ಸಂಸ್ಥೆಯ ಸಿಒಒ ರಮಾಮಣಿ ಮಾತನಾಡಿ, ನಾಗರಿಕರು, ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು, ಸಂಸ್ಕರಣಾ ಘಟಕಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ವಿವರವಾದ ಮಾಹಿತಿ ನೀಡಿದರು.ಕೋಟ್...

ತ್ಯಾಜ್ಯದ ನಿರ್ವಹಣೆಯನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ಮಾಡಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಸ್ವಚ್ಛ ಬೆಂಗಳೂರಿಗೆ ನಾಗರಿಕರ ಸಹಕಾರ ಬೇಕು.

-ಕರೀಗೌಡ, ಸಿಇಒ, ಬಿ.ಎಸ್.ಡಬ್ಲ್ಯು.ಎಂ.ಎಲ್‌

4 ವಿಧಗಳಲ್ಲಿ ತ್ಯಾಜ್ಯದ ಕಡ್ಡಾಯ ವಿಂಗಡಣೆ* ಹಸಿ ತ್ಯಾಜ್ಯ: ಜೈವಿಕವಾಗಿ ಕರಗುವ ತ್ಯಾಜ್ಯ.

* ಒಣ ತ್ಯಾಜ್ಯ: ಮರುಬಳಕೆ ಮಾಡಬಹುದಾದ ತ್ಯಾಜ್ಯ.

* ನೈರ್ಮಲ್ಯ ತ್ಯಾಜ್ಯ (ಸ್ಯಾನಿಟರಿ ವೇಸ್ಟ್): ವೈಯಕ್ತಿಕ ನೈರ್ಮಲ್ಯಕ್ಕೆ ಬಳಸಿದ ತ್ಯಾಜ್ಯ.

* ವಿಶೇಷ ಕಾಳಜಿಯ ತ್ಯಾಜ್ಯ: ವಿಲೇವಾರಿ ವೇಳೆ ವಿಶೇಷ ಎಚ್ಚರಿಕೆ ಅಗತ್ಯವಿರುವ ತ್ಯಾಜ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಏ.24ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ ಡೌಟ್‌
ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ