ಬೆಂಗಳೂರು : ರಸ್ತೆ ಗುಂಡಿ ಮುಚ್ಚಲು ದುಬಾರಿ ಐಷಾರಾಮಿ ಪೋರ್ಷ್ ಕಾರಿನ ಮೇಲೆ ಉದ್ಯಮಿಯೊಬ್ಬರು ಸಿಮೆಂಟ್, ಕಾಂಕ್ರಿಟ್ ಮಿಶ್ರಣ ಮಾಡಿರುವ ವಿಡಿಯೋವೊಂದು ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಕಾರಿನ ಪೇಯಿಂಟ್ ರಕ್ಷಣೆ, ಸೆರಾಮಿಕ್ ಕೋಟಿಂಗ್ ಮಾಡುವ ಮಳಿಗೆ ಹೊಂದಿರುವ ಉದ್ಯಮಿ ಅಖಿಲ್ ಎಂಬಾತ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಾರಿನಲ್ಲಿ ಬಂದು ಸಿಮೆಂಟ್, ಕಾಂಕ್ರಿಟ್ ಮತ್ತು ನೀರನ್ನು ಪೋರ್ಷ್ ಕಾರಿನ ಬಾನೆಟ್ ಮೇಲೆ ಹಾಕಿ ಮಿಶ್ರಣ ಮಾಡಿ ಅದನ್ನು ರಸ್ತೆ ಗುಂಡಿಗೆ ಹಾಕಿ ಮುಚ್ಚುವ ಪ್ರಯತ್ನ ಮಾಡುತ್ತಾರೆ. ಬಳಿಕ ಬಾನೆಟ್‌ಗೆ ಅಂಟಿಸಿರುವ ಪ್ಲಾಸ್ಟಿಕ್ ಕವರ್ ತೆಗೆಯುತ್ತಾರೆ.
‘ನಮ್ಮ ಸುತ್ತಲಿನ ಪ್ರದೇಶಗಳ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಬೇಕು. ಎಲ್ಲವನ್ನು, ಎಲ್ಲ ಸಮಯದಲ್ಲೂ ಸರ್ಕಾರವೇ ಎಲ್ಲವನ್ನು ಮಾಡಬೇಕು ಎಂದು ನಿರೀಕ್ಷಿಸಲಾಗದು’ ಎಂಬ ಅಡಿಬರಹ ನೀಡಿದ್ದಾರೆ. ಇದು ತಮ್ಮ ಅಂಗಡಿಯ ಉತ್ಪನ್ನದ ಪ್ರಚಾರ ತಂತ್ರ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.