ಕಾರ್ಕಳ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ವತಿಯಿಂದ ಯುವನಿಧಿ ಮಾಹಿತಿ ಕಾರ್ಯಾಗಾರ ಮತ್ತು ಕೌಶಲ್ಯ ಹಾಗೂ ಉದ್ಯೋಗ ಮಾಹಿತಿ ಕಾರ್ಯಕ್ರಮ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಹಾಗೂ ಉದ್ಯೋಗ ಮಾಹಿತಿ ಕೋಶದ ಸಹಯೋಗದಲ್ಲಿ ನಡೆಯಿತು.ಪಂಚ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾಜದ ಅಂಚಿನಲ್ಲಿರುವ ಜನರನ್ನು ತಲುಪುವ ಉದ್ದೇಶದಿಂದ ರೂಪುಗೊಂಡ ಯೋಜನೆಗಳಲ್ಲಿ ಯುವನಿಧಿ ಪ್ರಮುಖವಾಗಿದೆ ಎಂದರು. ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಯೋಜನೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ಅಲ್ಪ ಮಟ್ಟಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.
ಕಾರ್ಕಳ ತಾಲೂಕು ಯುವನಿಧಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಮಾತನಾಡಿ, ಯುವನಿಧಿ ಯೋಜನೆ ಕುರಿತ ಮಾಹಿತಿಯನ್ನು ಕಾಲೇಜು ಮಟ್ಟದಲ್ಲಿ ನೀಡುವುದು ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ. ಪದವಿ ನಂತರ ಉದ್ಯೋಗ ಸಿಗುವವರೆಗೆ ನೆರವಾಗುವ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಸಮಿತಿಯ ಉದ್ಯೋಗ ಮಾಹಿತಿ ಕಾರ್ಯನಿರ್ವಾಹಕರಾದ ಲತಾ ಅವರು ಯುವನಿಧಿ ಯೋಜನೆಯ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕ್ರಮಗಳ ಬಗ್ಗೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಸರ್ಕಾರದ ಯೋಜನೆಗಳ ಮಹತ್ವವು ಅವುಗಳ ಅಗತ್ಯತೆ ಎದುರಾದಾಗ ತಿಳಿಯುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದ ದಾರಿಯಲ್ಲಿ ತಪ್ಪದೆ ಸಾಗಿದರೆ ಇಂತಹ ಯೋಜನೆಗಳು ಹೆಚ್ಚಿನ ಫಲ ನೀಡುತ್ತವೆ ಎಂದು ಹೇಳಿದರು.