ಮಂಗಳೂರು: ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ನಿಗದಿತವಾಗಿ ಜಮೆ ಮಾಡಬೇಕು. ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಲು ಬಾಕಿ ಇರುವ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮ ವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಡಿತರ ಚೀಟಿ ತಿದ್ದುಪಡಿಗೆ ಸಂಬಂಧಿಸಿದಂತೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್‍ಗಳಲ್ಲಿ ಅರ್ಜಿ ಸಲ್ಲಿಸಿದರೆ ಅನುಮೋದನೆಯಾಗುವವರೆಗೆ ರೇಶನ್ ಕಾರ್ಡ್ ಪ್ರತಿಯನ್ನು ನೀಡದಂತೆ ಗ್ರಾಮ ಒನ್‌ನವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧ್ಯಕ್ಷರು ತಿಳಿಸಿದರು.ಕಡಬದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ರಚಿಸಲು 3 ಕಡೆಗಳಲ್ಲಿ ತಹಸೀಲ್ದಾರ್ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಜಾಗ ಗುರುತಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವಂತೆ ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ತಿಳಿಸಿದರು.ಮಾಣಿಯಲ್ಲಿ ಫ್ಲೈ ಓವರ್ ಕೆಳಗೆ ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್ ಬಸ್ಸುಗಳು ನಿಲುಗಡೆ ಮಾಡುವುದಿಲ್ಲ ಎಂದು ತಿಳಿಸಿದಾಗ, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಜಿಲ್ಲಾಧ್ಯಕ್ಷರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ನೈಜತೆ ಪರಿಶೀಲನೆ ನಡೆಸಿ, ಉದ್ಯೋಗದಲ್ಲಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕೃತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಭರತ್ ಮುಂಡೋಡಿ ತಿಳಿಸಿದರು.ದ.ಕ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಪಂಚಾಯ್ತಿ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್., ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಾರಾಯಣ ನಾಯ್ಕ್, ಸದಸ್ಯರಾದ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ., ಉಮಾನಾಥ ಶೆಟ್ಟಿ, ಬಿ.ಪದ್ಮನಾಭ ಸಾಲ್ಯಾನ್ ಮತ್ತಿತರರು ಇದ್ದರು.