ಕಾರ್ಮಿಕರ ಕೊಡುಗೆ ಅರಿತುಕೊಳ್ಳಿ: ವಿ.ಪಿ. ಶಶಿಧರ್

KannadaprabhaNewsNetwork |  
Published : Sep 25, 2026, 02:45 AM IST
ಕಾರ್ಯಕ್ರಮ ಉದ್ಘಾಟನೆ | Kannada Prabha

ಸಾರಾಂಶ

ಕುಶಾಲನಗರದ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕುಶಾಲನಗರ ಪುರಸಭೆ ಪೌರಕಾರ್ಮಿಕರ ದಿನಾಚರಣೆ

ಕುಶಾಲನಗರ: ಪೌರಕಾರ್ಮಿಕರ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಿರದೆ ಸಮಾಜದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡುವ ಕಾರ್ಮಿಕರ ಕೊಡುಗೆಯನ್ನು ಅರಿತುಕೊಳ್ಳುವ ದಿನವಾಗಬೇಕು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.

ಕುಶಾಲನಗರದ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕುಶಾಲನಗರ ಪುರಸಭೆ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಹಲವು ರೀತಿಯ ತ್ಯಾಜ್ಯ, ದುರ್ವಾಸನೆ, ಕೊಳಚೆ ಹಾಗೂ ಆರೋಗ್ಯದ ಅಪಾಯಗಳನ್ನು ಎದುರಿಸುತ್ತಾರೆ. ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಬದಿಗಿಟ್ಟು ಪಟ್ಟಣದ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗಾಗಿ ದುಡಿಯುತ್ತಾರೆ. ಕಾರ್ಮಿಕರನ್ನು ಕೇವಲ ‘ಕಸ ತೆಗೆಯುವವರು’ ಎಂದು, ನೋಡುವ ಬದಲು, ಸಮಾಜದ ಆರೋಗ್ಯವನ್ನು ರಕ್ಷಿಸುವ ಪ್ರಮುಖ ಸೇವಾ ಸಿಬ್ಬಂದಿ ಎಂದು ಗೌರವಿಸುವಂತಾಗಬೇಕು ಎಂದರು.

ಉಪ ವಿಭಾಗಾಧಿಕಾರಿ, ಕುಶಾಲನಗರ ಪುರಸಭೆ ಆಡಳಿತ ಅಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಪುರಸಭೆ ಪೌರಕಾರ್ಮಿಕರನ್ನು ಹೊಗಳ ಬೇಕಿಲ್ಲ, ಸನ್ಮಾನಿಸಬೇಕಿಲ್ಲ ಆದರೆ ಅವರನ್ನು ಗೌರವದಿಂದ, ಮಾನವೀಯತೆಯಿಂದ ನೋಡುವ ಮನಸುಗಳ ಅಗತ್ಯತೆ ಇದೆ ಎಂದರು.

ಪುರಸಭೆ ಮಾಜಿ ಸದಸ್ಯ ನಂಜುಂಡಸ್ವಾಮಿ ಮಾತನಾಡಿ, ಸಮಾಜದ ಮುಖ್ಯ ವಾಹಿನಿಯಲ್ಲಿ ನಿತ್ಯ ಪಾಲ್ಗೊಳ್ಳುವ ಪೌರಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು. ಸರ್ಕಾರವು ಪೌರಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಬೇಕು ಎಂದರು.

ಪುರಸಭೆಯ ಮುಖ್ಯ ಅಧಿಕಾರಿ ಗಿರೀಶ್ ಟಿ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೌರಕಾರ್ಮಿಕರ ಪ್ರತಿನಿಧಿ ಗಣೇಶ್ ಮಾತನಾಡಿ, ಸರ್ಕಾರದ ಎಲ್ಲ ಹುದ್ದೆಗಳಿಗೆ ಇರುವಂತೆ ಪೌರಕಾರ್ಮಿಕರಿಗೆ ಪದೋನ್ನತಿ ಅವಕಾಶ ಇಲ್ಲ. ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕಿದೆ ಎಂದರು.

ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಮಾತನಾದರು. ಪೌರಕಾರ್ಮಿಕರಿಗೆ ನಗದು ರು. 7,000 ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಬೋನಸ್ ರೂಪದಲ್ಲಿ ವಿತರಿಸಲಾಯಿತು.

ಪೌರಕಾರ್ಮಿಕರಿಗಾಗಿ ನಡೆದ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಪುರಸಭೆಯ ಆವರಣದಿಂದ ಕಾರ್ಯಕ್ರಮ ನಡೆಯುವ ಗೌಡ ಸಮಾಜದ ತನಕ ಪೌರಕಾರ್ಮಿಕರು ಜಾಥಾ ನಡೆಸಿದರು.

ಕುಶಾಲನಗರ ಪೌರಕಾರ್ಮಿಕ ಸಂಘಟನೆಯ ಅಧ್ಯಕ್ಷ ಧನಂಜಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷರಾದ ಜಯಲಕ್ಷ್ಮಿ, ಸದಸ್ಯರಾದ ಜಯಲಕ್ಷ್ಮಮ್ಮ, ಪದ್ಮಾವತಿ, ಜಗದೀಶ್, ನವೀನ್, ಸಂಘಟನೆಯ ಉಪಾಧ್ಯಕ್ಷೆ ರಶ್ಮಿ ಅಧ್ಯಕ್ಷತೆ ಇದ್ದರು. ಆರೋಗ್ಯ ಅಧಿಕಾರಿ ಉದಯಕುಮಾರ್, ಕಚೇರಿ ನಿರ್ವಾಹಕರಾದ ಸವಿತಾ ಮತ್ತು ಶಿಕ್ಷಕಿ ಗಾಯತ್ರಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟರ್ ಮೆಟ್ರೋ ಯೋಜನೆಗೆ ವೇಗ: ೧೧ ನಿಲ್ದಾಣಗಳು ಅಂತಿಮ
ಕಿಲ್ಲೆ ಮೈದಾನ ಸಾರ್ವಜನಿಕ ಗಣೇಶೋತ್ಸವ ಶೋಭಾಯಾತ್ರೆ