ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಿಗೆ ವ್ಯಾಪಕ ಪ್ರಚಾರ ನೀಡಿ, ಅವುಗಳ ಲಾಭವನ್ನು ತಳಮಟ್ಟದ ಜನರಿಗೆ ತಲುಪಿಸುವುದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳ ಮಟ್ಟದ ಸಮಾವೇಶಗಳನ್ನು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು. ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸ್ವಸಹಾಯ ಗುಂಪುಗಳನ್ನು ರಚಿಸಿ ಸರ್ಕಾರದ ವಿವಿಧ ಯೋಜನೆಗಳೊಂದಿಗೆ ಒಗ್ಗೂಡಿಸಿಕೊಂಡು ವಿವಿಧ ಆದಾಯ - ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದ್ದು, ಈ ಕುರಿತು ಆದಷ್ಟು ಶೀಘ್ರದಲ್ಲಿ ಗುಂಪುಗಳನ್ನು ರಚನೆ ಮಾಡುವಂತೆ ಸಮಿತಿಯ ಸದಸ್ಯರಿಗೆ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್ ಬಾಯಲ್, ಸಿಪಿಒ ಉದಯ್ ಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಗೀತಾ ವಾಗ್ಳೆ, ಪ್ರಶಾಂತ್ ಜತ್ತನ್, ತಾಲೂಕು ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ ಸರ್ಕಾರಿ ಬಸ್ಸು ಪುನರಾರಂಭ
ಗ್ರಾಮೀಣ ಪ್ರದೇಶದ ಜನರ ಬೇಡಿಕೆಯಂತೆ ಗೋಳಿಯಂಗಡಿ-ವಡ್ಡರ್ಸೆ-ಕುಂದಾಪುರ ಮಾರ್ಗದಲ್ಲಿ ಹೊಸ ಸರ್ಕಾರಿ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಕೊರೋನಾ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಕೋಡಿಬೆಂಗ್ರೆ, ಬ್ರಹ್ಮಾವರ, ಹೆಬ್ರಿ, ಪೆರ್ಣಂಕಿಲ, ತಲ್ಲೂರು, ಮಾವಿನಕಟ್ಟೆ, ನೇರಳಕಟ್ಟೆ, ಬೈಂದೂರು, ಪಡುವರಿ. ಸೋಮೇಶ್ವರ, ದೊಂಬೆ, ಶಿರೂರು, ನಾಡಾ, ಬಡಾಕೆರೆ ಮಾರ್ಗಗಳ ಬಸ್ಸುಗಳನ್ನು ಜಿಲ್ಲಾ ಹಾಗೂ ತಾಲೂಕು ಅನುಷ್ಠಾನ ಸಮಿತಿಗಳ ಸತತ ಅನುಸರಣೆಯಿಂದ ಕಾರ್ಯಾರಂಭಗೊಂಡಿವೆ ಎಂದು ತಿಳಿಸಿದರು.