ಕನ್ನಡಪ್ರಭ ವಾರ್ತೆ ಬೆಂಗಳೂರು
ಗಾಂಧಿನಗರದ ಉಡುಪಿ ಭವನ ವೆಜ್ ರೆಸ್ಟೋರೆಂಟ್‌ನಲ್ಲಿ ಸಿಲಿಂಡರ್ ಅಭಾವದಿಂದಾಗಿ ಅಡುಗೆ ತಯಾರಿಸಲು ಸೌದೆಯನ್ನು ಬಳಸುತ್ತಿದ್ದಾರೆ. ಹೋಟೆಲ್ ಮುಂದೆಯೇ ಸೌದೆ ಒಲೆ ಹಾಕಿ ಅಡುಗೆ ತಯಾರಿ ಮಾಡುತ್ತಿದ್ದುದು ಭಾನುವಾರ ಕಂಡುಬಂತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೋಟೆಲ್ ಮಾಲೀಕರು, ‘ಗ್ಯಾಸ್ ಸಿಲಿಂಡರ್ ಸಿಗದಿದ್ದರಿಂದ ಒಂದು ವಾರ ಹೋಟೆಲ್ ಬಂದ್ ಮಾಡಿದ್ದೆವು. ನಮ್ಮಲ್ಲಿ 50 ರೂಂಗಳಿವೆ. ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ರೂಂಗಳು ಈಗಾಗಲೇ ಬುಕ್ ಆಗಿವೆ. ಸಿಬ್ಬಂದಿ ಇದ್ದರೂ ಅಡುಗೆ ತಯಾರಿಸಲು ಅನಿಲ ಸಿಲಿಂಡರ್ ಇಲ್ಲ. ಆದ್ದರಿಂದ ವಿಧಿಯಿಲ್ಲದೇ ಸೌದೆ ಒಲೆ ಬಳಸುತ್ತಿದ್ದೇವೆ. ಸೋಮವಾರದಿಂದ ಹೋಟೆಲ್‌ಗಳಿಗೆ ಶೇ.50 ರಷ್ಟು ಎಲ್‌ಪಿಜಿ ಸರಬರಾಜು ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ಬರುತ್ತಿಲ್ಲ ಎನ್ನುತ್ತಿದ್ದಾರೆ. ಸರ್ಕಾರವು ಹೋಟೆಲ್ ಉದ್ಯಮ ಉಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಡೀಸೆಲ್, ಸೀಮೆಎಣ್ಣೆ ಸ್ಟೌ ಬಳಕೆ
ಬಾಕ್ಸ್....
ಆಟೋಗಳಿಗೆ ಸಿಗದ ಗ್ಯಾಸ್
ನಗರದಲ್ಲಿ ಆಟೋಗಳಿಗೆ ಉಂಟಾಗಿದ್ದ ಗ್ಯಾಸ್ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣಿಸುತ್ತಿಲ್ಲ. ಆಟೋ ಗ್ಯಾಸ್ ಸರಬರಾಜು ಆಗದಿರುವುದರಿಂದ ಮಾಗಡಿ ರಸ್ತೆಯ ಟೋಟಲ್ ಎನರ್ಜಿಸ್ ಗ್ಯಾಸ್ ಸ್ಟೇಷನ್ ಮುಚ್ಚಿದೆ. ಬಂದ್ ಆಗಿರುವ ವಿಷಯ ತಿಳಿಯದೇ ಬಂದ ಆಟೋದವರು ವಾಪಸ್ ಹೋಗುತ್ತಿದ್ದುದು ಕಂಡುಬಂತು. ‘ಸರ್ಕಾರ ಆಟೋ ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೀವನ ನಿರ್ವಹಣೆ ಮಾಡುವುದು ಹೇಗೆ’ ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.