ಅಂಕೋಲಾ : ಶಿರೂರು ಗುಡ್ಡಕುಸಿತ ದುರಂತ ವೇಳೆ ಗಂಗಾವಳಿ ನದಿ ಪಾಲಾಗಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಟ್ಯಾಂಕರ್‌ನಿಂದ ಸುರಕ್ಷಿತವಾಗಿ ಅನಿಲ ಖಾಲಿ ಮಾಡುವ ಕಾರ್ಯಾಚರಣೆ ಗುರುವಾರ ಯಶಸ್ವಿಯಾಗಿದೆ. ಮಂಗಳೂರಿನಿಂದ ಆಗಮಿಸಿದ್ದ ತಜ್ಞರು ಸುರಕ್ಷಿತ ನಿಯಂತ್ರಿತ ವಿಧಾನಗಳಿಂದ ಟ್ಯಾಂಕರ್‌ನಲ್ಲಿದ್ದ 16 ಟನ್ ಗ್ಯಾಸ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಅಪಾಯವಾಗದ ರೀತಿ ಟ್ಯಾಂಕರ್ ಖಾಲಿ ಮಾಡುವ ಕಾರ್ಯಾಚರಣೆ ನಡೆಸಿದರು.
ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್‌ಪಿ) ಕಂಪನಿಗೆ ಸೇರಿದ ಅಡುಗೆ ಅನಿಲದ ಟ್ಯಾಂಕರ್ ಇದಾಗಿದ್ದು, ಕಂಪನಿಯ ಜನರಲ್ ಮ್ಯಾನೇಜರ್ ಚೆನ್ನೈನಿಂದ ಆಗಮಿಸಿದ್ದರು. ಇವರ ನೇತೃತ್ವದಲ್ಲಿ ಟ್ಯಾಂಕರ್ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಎಚ್‌ಪಿ ಕಂಪನಿಯ ಸ್ಟಾಂಡರ್ಡ್ ಆಪರೇಟಿಂಗ್ ಸಿಸ್ಟಮ್ (ಎಸ್‌ಒಪಿ) ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ.
ಹೇಗೆ ನಡೆಯಿತು ಕಾರ್ಯಾಚರಣೆ?: ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ತಜ್ಞರು, ಮೊದಲಿಗೆ ನದಿಯಲ್ಲಿ ತೇಲಿ ಹೋದ ಟ್ಯಾಂಕರ್ ಅನ್ನು ಸಗಡಗೇರಿ ನದಿ ದಡಕ್ಕೆ ರೋಪ್ ಮೂಲಕ ಎಳೆದು ತರುವ ಕಾರ್ಯಾಚರಣೆ ನಡೆಸಿದರು. ಎಲ್ಲ ತಾಂತ್ರಿಕ ಹಾಗೂ ವೈಜ್ಞಾನಿಕ ಕ್ರಮಗಳು, ಪರಿಶೀಲನೆಗಳು ನಡೆದ ಬಳಿಕ ಮಧ್ಯಾಹ್ನ 2 ಗಂಟೆಯಿಂದ ಗ್ಯಾಸ್ ಅನ್ನು ನೀರಲ್ಲಿ ಮಿಶ್ರಣ ಮಾಡಿ ನಾಶಪಡಿಸುವ ಪ್ರಕ್ರಿಯೆ ನಡೆದಿದೆ.
ಪರಿಣಿತರ ಮಾರ್ಗದರ್ಶನದಲ್ಲಿ ಸುತ್ತಮುತ್ತಲ ಪರಿಸರದಲ್ಲಿ ಜನರನ್ನು ದೂರ ಸರಿಸಿ ಕಾರ್ಯಾಚರಣೆ ನಡೆಯಿತು. ಎಚ್‌ಪಿ ಕಂಪನಿಯ 20 ಪರಿಣಿತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕದ 4 ವಾಹನಗಳು ಸ್ಥಳದಲ್ಲಿ ಕಾಯ್ದಿರಿಸಲಾಗಿತ್ತು. ಗುರುವಾರ ರಾತ್ರಿ 8- 9 ಗಂಟೆ ಸುಮಾರಿಗೆ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಕಾರ್ಯಾಚರಣೆಗಾಗಿಯೇ ಸಗಡಗೇರಿ ಗ್ರಾಮಸ್ಥರನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ, ಅವರಿಗೆ ಕಾಳಜಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
1 ಕಿ.ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ನಿಷೇಧ: ಟ್ಯಾಂಕರ್‌ನಿಂದ ಸೋರುತ್ತಿದ್ದ ಗ್ಯಾಸನ್ನು ನೀರಿನಲ್ಲಿ ಮಿಶ್ರಣ ಮಾಡುವ ಕಾರ್ಯಾಚರಣೆ ವೇಳೆ ಸುತ್ತಮುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಅಗರಬತ್ತಿ ಹಚ್ಚದಂತೆ, ಬೀಡಿ, ಸಿಗರೇಟ್ ಸೇದದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಇದರ ಪರಿಶೀಲನೆಗೆ ವಿಶೇಷ ಪೊಲೀಸ್ ತಂಡವನ್ನೂ ರಚಿಸಲಾಗಿತ್ತು. ಆದರೂ ಕೆಲವರು ಕದ್ದು ಮುಚ್ಚಿ ಬೀಡಿ ಸೇದಿ ತಮ್ಮ ಚಟ ತೀರಿಕೊಂಡರು. ಇನ್ನೊಂದೆಡೆ ಶಿರೂರು ಬಳಿ ಧೂಮಪಾನ ಮಾಡುತ್ತಿದ್ದಾಗ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಸಂಗವೂ ನಡೆಯಿತು.