ಸಂಜೀವರಾಯಸ್ವಾಮಿ ಜಾತ್ರೆ ಸಂಪನ್ನ

KannadaprabhaNewsNetwork | Published : Jul 19, 2024 12:46 AM

ಸಾರಾಂಶ

ಚನ್ನಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀ ಸಂಜೀವರಾಯಸ್ವಾಮಿ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ಗುರುವಾರ ಸಂಪನ್ನಗೊಂಡಿತು.

ಚನ್ನಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀ ಸಂಜೀವರಾಯಸ್ವಾಮಿ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ಗುರುವಾರ ಸಂಪನ್ನಗೊಂಡಿತು.

ಬೆಳಿಗ್ಗೆ ೧೨.೨೦ಕ್ಕೆ ಸಲ್ಲುವ ಶುಭಲಗ್ನದಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮ ಮುಖಂಡರು ಉಪಸ್ಥಿತರಿದ್ದರು. ರಥೋತ್ಸವದ ವೇಳೆ ನೆರೆದಿದ್ದ ಸಹಸ್ರಾರು ಭಕ್ತರು ಸ್ವಾಮಿಯ ರಥ ಎಳೆದು ಭಕ್ತಿಭಾವ ಮೆರೆದರು. ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ಸಂಜೀವರಾಯಸ್ವಾಮಿ ದರ್ಶನ ಪಡೆಯಲು ಬೆಳಿಗ್ಗೆಯಿಂದಲೆ ಭಕ್ತರು ಸರದಿಯಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ರಥೋತ್ಸವದಲ್ಲಿ ಲಕ್ಷ್ಮಿವೆಂಕಟೇಶ್ವರಸ್ವಾಮಿಗೆ ಜೈಕಾರ ಹಾಕಿದ ಭಕ್ತಾಧಿಗಳು, ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ:

ಇದಕ್ಕೂ ಮೊದಲು ವಿಶ್ವಕಲಾ ವೈಭವ ಸುವರ್ಣ ಮಹಾಮಂಟಪದಲ್ಲಿ ಶ್ರೀಸಂಜೀವರಾಯಸ್ವಾಮಿಗೆ ವೈಕುಂಠ ಸೇವಾದರ್ಶನ, ತೋಮಾಲ ಸೇವೆ, ಮಹಾಮಂಗಳಾರತಿ, ವಿಮಾನ ಗೋಪುರಕ್ಕೆ ವಿದ್ಯುತ್ ಅಲಂಕಾರ, ಪುಷ್ಪಾಲಂಕಾರಗಳು, ವಿಶ್ವರೂಪ ದರ್ಶನ ಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ, ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆ ನೆರವೇರಿದವು.

ನವಜೋಡಿಗಳ ಕಲರವ: ಆಷಾಢಮಾಸದಲ್ಲಿ ನಡೆಯುವ ದೇವರಹೊಸಹಳ್ಳಿ ಜಾತ್ರೆಯ ವಿಶೇಷವೇನೆಂದರೆ ಹೊಸದಾಗಿ ಮದುವೆಯಾದ ನವಜೋಡಿಗಳು. ಆಷಾಢ ಹಬ್ಬಕ್ಕೆಂದು ಅತ್ತೆಮನೆಗೆ ಬರುವ ಹೊಸ ಅಳಿಯ ನವವಧುವಿನೊಂದಿಗೆ ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದು ವಿಶೇಷ. ಹೀಗಾಗಿ ಜಾತ್ರೆಯಲ್ಲಿ ನವ ವಧುವರರ ಕಲರವವಿತ್ತು.

ಗುರುವಾರ ಬೆಳಗ್ಗಿನಿಂದ ಮಳೆ ಸುರಿಯುತ್ತಿದ್ದ ಕಾರಣ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ರಥ ಎಳೆಯುವ ವೇಳೆಯಲ್ಲಿಯೂ ಮಳೆ ಸುರಿಯುತ್ತಲೇ ಇತು. ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್, ಸಂಸದ ಡಾ.ಮಂಜುನಾಥ್ ಪಾಲ್ಗೊಂಡು ದೇವರ ದರ್ಶನ ಪಡೆದರು.

Share this article