ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋತಾಗಲೂ ಅನುದಾನ ತಂದಿರುವ ಕೀರ್ತಿ ಹೊಂದಿರುವ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ತಮ್ಮ ಈ ಬದ್ಧತೆಯ ಕಾರಣದಿಂದಲೇ 5 ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇಂತಹ ಜನಪ್ರಿಯ ಮತ್ತು ಕೆಲಸಗಾರ ಶಾಸಕರ ಕುರಿತು ಮಾಜಿ ಶಾಸಕ ಆಯನೂರು ಮಂಜುನಾಥ್ ಬೇಕಾಬಿಟ್ಟಿಯಾಗಿ ಮಾತನಾಡುವುದು, ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಕಿಡಿಕಾರಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯಲ್ಲಿ ನಡೆದ ಪೊಲೀಸ್ ವಸತಿ ಕಟ್ಟಡ ಉದ್ಘಾಟನೆಯ ಕಾರ್ಯಕ್ರಮದ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಪ್ರಮುಖರೇ ಜ್ಞಾನೇಂದ್ರ ಅವರ ಕಾರ್ಯ ಶೈಲಿಯನ್ನು ಹೊಗಳಿದ್ದಾರೆ. ಕ್ಷೇತ್ರಕ್ಕೆ ತಂದ ಅನುದಾನದ ಕುರಿತು ಶ್ಲಾಘನೀಯ ಮಾತುಗಳನ್ನಾಡಿದ್ದಾರೆ. ಆದರೆ ಆಯನೂರು ಮಂಜುನಾಥ್ ಮಾತ್ರ ಪೂರ್ವಾಗ್ರಹಪೀಡಿತರಾಗಿ ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ರಾಜಕೀಯ ಕಾರಣಕ್ಕಾಗಿ ಇಂತಹ ಟೀಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೊರೆದಿರುವಲ್ಲಿ ಸ್ವಲ್ಪ ನೀರು ಜಿನುಗಿದೆ. ಆದರೆ ಇದರ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.ತೀರ್ಥಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ಹೆದ್ದೂರು ಮಾತನಾಡಿ, ತೀರ್ಥಹಳ್ಳಿ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಜ್ನಾನೇಂದ್ರ ಅವರು ಯಾವುದೇ ರೀತಿಯ ಕಪ್ಪು ಚುಕ್ಕೆ ಹೊಂದಿಲ್ಲದ ರಾಜ್ಯದ ನಾಯಕ. ಯಡಿಯೂರಪ್ಪ ಜೊತೆಗೆ ರಾಜಕೀಯ ಆರಂಭ ಮಾಡಿ. ಐದು ಅವಧಿಗೆ ಶಾಸಕರಾಗಿದ್ದರೂ ಅಧಿಕಾರಕ್ಕಾಗಿ ಲಾಬಿ ಮಾಡಲಿಲ್ಲ. ಒಂದೂವರೆ ಅವಧಿಯಲ್ಲಿ ಮಂತ್ರಿಗಿರಿ ಸಿಕ್ಕಾಗ ಕ್ಷೇತ್ರಕ್ಕೆ ಸುಮಾರು 3500 ಕೋಟಿ ರು. ಅನುದಾನ ತಂದಿದ್ದಾರೆ ಎಂದು ಹೇಳಿದರು.
ಆಯನೂರು ಮಂಜುನಾಥ್ ಈಗ ಸವಕಲು ನಾಣ್ಯ. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಅವರ ಪರಿಸ್ಥಿತಿ ಕಂಡು ಅಯ್ಯೋ ಪಾಪ ಎನಿಸುತ್ತೆ. ನಾಲ್ಕು ಸದನದ ಮೆಟ್ಟಲು ಹತ್ತುವ ಅವಕಾಶ ಸಿಕ್ಕಿದ್ದು ಬಿಜೆಪಿಯಿಂದ ಎಂಬುದನ್ನು ಮರೆತಿದ್ದಾರೆ. ಕೇವಲ ಅಸ್ತಿತ್ವಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಈಗ ಅಧಿಕಾರ ಇರುವ ಪಕ್ಷದಲ್ಲಿ ಇದ್ದಾರೆ, ತನಿಖೆ ಮಾಡಿಸಲಿ, ಎಲ್ಲಾ ತನಿಖಾ ತಂಡಗಳು ಅವರ ಸರ್ಕಾರದ ಬಳಿಯೇ ಇದೆ. ಆರೋಪ ಸಾಬೀತಾಗಲಿ. ಹಿಟ್ ಅಂಡ್ ರನ್ ಬೇಡ ಎಂದು ಸವಾಲ್ ಹಾಕಿದರು.ಈ ಸಂದರ್ಭದಲ್ಲಿ ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಕೆ ವಿ ಅಣ್ಣಪ್ಪ, ಮಾಲತೇಶ್, ಕುಪೇಂದ್ರ, ರತ್ನಾಕರ ಶೆಣೈ ಹಾಜರಿದ್ದರು.