ಕನ್ನಡಪ್ರಭ ವಾರ್ತೆ ಉಡುಪಿಮಧ್ಯಪ್ರಾಚ್ಯ ಯುದ್ಧದಿಂದಾಗಿ ಗ್ಯಾಸ್ ಕೊರತೆಯಾಗಿ ಎಲ್ಲರೂ ಅದನ್ನೇ ಮಾತನಾಡುತ್ತಿದ್ದಾರೆ. ಸೈಬರ್ ವಂಚಕರು ಕೂಡ ತಮ್ಮ ವಂಚನೆಗೆ ಈ ಗ್ಯಾಸ್ ವಿಷಯವನ್ನೇ ಬಳಸಿಕೊಳ್ಳುತ್ತಿದ್ದಾರೆ!.
ಇಲ್ಲಿನ ಸಂತೆಕಟ್ಟೆಯ ಹಿರಿಯ ನಾಗರಿಕರಾದ ಲಿಲ್ಲಿ ಪ್ಲೋರಿನ್ ಡಿಸಿಲ್ವಾ ಅವರ ಮೊಬೈಲಿಗೆ ಬೆಳಿಗ್ಗೆ 11ಕ್ಕೆ ಕರೆಯೊಂದು ಬಂದಿದ್ದು, ತಾನು ಮುಂಬೈಯ ಮಹಾನಗರ ಗ್ಯಾಸ್ ಲಿಮಿಡೆಟ್ ಅಧಿಕಾರಿ ದೇವೇಶ ಜೋಷಿ ಎಂದು ಪರಿಚಯ ಮಾಡಿಕೊಂಡಿದ್ದು, ಲಿಲ್ಲಿ ಅವರು ಎಲ್‌ಪಿಜಿ ಗ್ಯಾಸ್‌ಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ್ದು, ಕೆವೈಸಿ ಅಪ್‌ಡೇಟ್ ಆಗಿಲ್ಲ ಎಂದು ಹೇಳಿದರು. ನಂತರ ಅವರ ವಾಟ್ಸಾಪ್‌ಗೆ ಸಂದೇಶವನ್ನು ಕಳುಹಿಸಿದ್ದು ಅದನ್ನು ಡೌನ್‌ಲೋಡ್ ಮಾಡುವಂತೆ ಹೇಳಿದ್ದರು, ಅದರಂತೆ ಲಿಲ್ಲಿಅವರು ಡೌನ್ ಲೋಡ್ ಮಾಡಿ ಅದರಲ್ಲಿ ಕೆವೈಸಿ ಅಪ್‌ಡೇಟ್ ಮಾಡಿದ್ದರು. ಮಧ್ಯಾಹ್ನ 3ಕ್ಕೆ ಆರೋಪಿ ಮತ್ತೆ ಕರೆ ಮಾಡಿ ತಾಂತ್ರಿಕ ದೋಷದಿಂದ ಅಪ್‌ಡೇಟ್ ಆಗಿಲ್ಲ ಎಂದು ಹೇಳಿ, ಲಿಲ್ಲಿ ಅವರ ಗಂಡನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡಿದ್ದ. 4 ಗಂಟೆಗೆ ಮೊಬೈಲ್ ಗೆ ಮೇಸೆಜ್ ಬಂದಿದ್ದು, ಅದರಲ್ಲಿ ಲಿಲಿ ಅವರ ಮುಂಬೈಯ ಐಸಿಐಸಿಐ ಭ್ಯಾಂಕ್ ಖಾತೆಯಿಂದ 46,636 ರು. ಮತ್ತು 29,381 ರು., ಗಂಡನ ಖಾತೆಯಿಂದ 69,005.31 ರು. ಕಡಿತಗೊಂಡಿರುವುದು ಪತ್ತೆಯಾಯಿತು. ವಂಚಕರು ಒಟ್ಟು 1,45,022 ರು. ಗಳನ್ನು ಕಡಿತಗೊಳಿಸಿ ವಂಚಿಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ, ಇಲ್ಲಿನ ಶಿವಳ್ಳಿ ಗ್ರಾಮದ ಮಂಗಳ ರವಿದಾಸ್ ನಾಯಕ್ ಎಂಬವರಿಗೂ ಅಪರಿಚಿತ ವ್ಯಕ್ತಿ ತಾನು ಮಹಾನಗರ ಗ್ಯಾಸ್ ಸಂಸ್ಥೆಯಿಂದ ಎಂದು ಪರಿಚಯಿಸಿ ಎಲ್‌ಪಿಜಿ ಬಿಲ್ ಬಾಕಿಯಾಗಿದೆ ಎಂದು ವಾಟ್ಸಾಪ್‌ಗೆ ಸಂದೇಶ ಕಳುಹಿಸಿದ್ದು, ಅವರ ಮತ್ತು ಗಂಡನ ಬ್ಯಾಂಕ್ ಖಾತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರ ಪಡೆದಿದ್ದಾನೆ. ನಂತರ ಗಂಡನ ಬಂಧನ್ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳಿಂದ ಒಟ್ಟು 9,78,036.50 ರು.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಅಧಿಕೃತ ಏಜೆನ್ಸಿಯೊಂದಿಗೆ ವ್ಯವಹರಿಸಿ: ಇಂತಹ ಸೈಬರ್ ವಂಚಕರ ಕರೆಗಳಿಗೆ ಸ್ಪಂದಿಸಬೇಡಿ, ನಿಮ್ಮ ಅಧಿಕೃತ ಎಲ್‌ಪಿಜಿ ಪೂರೈಕೆದಾರರೊಂದಿಗೆ ಮಾತ್ರ ವ್ಯವಹರಿಸಿ, ಅಪರಿಚಿತರು ಕಳಹಿಸುವ ಎಪಿಕೆ ಎಪಿಪಿ ಸಂದೇಶಗಳನ್ನು ತೆರೆಯಬೇಡಿ, ಅವುಗಳಲ್ಲಿ ಯಾವುದೇ ಮಾಹಿತಿಗಳನ್ನು ಅಪ್‌ಡೇಟ್ ಮಾಡಬೇಡಿ, ಎಪಿಕೆ ಎಪಿಪಿ ಫೈಲುಗಳನ್ನು ಸೈಬರ್ ವಂಚಕರೇ ಕಳುಹಿಸಿರುತ್ತಾರೆ. ಫಾಸ್ಟ್ ಎಲ್‌ಪಿಜಿ ಬುಕ್ಕಿಂಗ್, ಕಡಿಮೆ ಬೆಲೆಗೆ ಎಲ್‌ಪಿಜಿ ಇತ್ಯಾದಿಗಳನ್ನು ನಂಬಬೇಡಿ. ಇಂತಹ ಕರೆಗಳು ಬಂದಲ್ಲಿ, ತಿಳಿಯದೇ ಮೋಸ ಹೋದರೇ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ 1930ಗೆ ತಕ್ಷಣ ಕರೆ ಮಾಡಿ, ಇದರಿಂದ ಖಾತೆಯಿಂದ ಹಣ ಕಡಿತವಾಗುವುದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.