ಉಪ್ಪಿನಂಗಡಿ : ನಿಗದಿತ ಅವಧಿಗಿಂತ ಮೊದಲೇ ಬಿಳಿಯೂರು ಅಣೆಕಟ್ಟಿನ ಗೇಟು ಹಾಕುವ ಸಾಧ್ಯತೆ ಇದ್ದು ಗೇಟಿನ ಬಳಿ ಸಿಲುಕಿಕೊಂಡ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಅಣೆಕಟ್ಟಿನಲ್ಲಿ ೦.೨ ಟಿ ಎಂ ಸಿ ನೀರು ಸಂಗ್ರಹಣೆಯಾಗುತ್ತಿದ್ದು, ಪರಿಣಾಮ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ನದಿ ಪಾತ್ರದ ಗ್ರಾಮಗಳ ಅಂತರ್ಜಲ ವೃದ್ಧಿಯಾಗಿ ರೈತರ ಕೆರೆ ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಈ ಬಾರಿ ಮುಂಗಾರು ಮಳೆ ಗಣನೀಯವಾಗಿ ಕುಸಿದಿದ್ದು, ನದಿ ಈಗಾಗಲೇ ಸೊರಗಿದೆ. ಮಳೆ ಕೊರತೆ ಹಿನ್ನಲೆಯಲ್ಲಿ ನಿಗದಿತ ಅವಧಿಗೆ ಮೊದಲೇ ಗೇಟು ಅಳವಡಿಕೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪೂರಕವಾಗಿ ಅಣೆಕಟ್ಟಿನ ಗೇಟು ಅಳವಡಿಕೆಯ ಸ್ಥಳದಲ್ಲಿ ನೆರೆ ನೀರಿಗೆ ಬಂದು ಸಿಲುಕಿಕೊಂಡ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ಈಗಾಗಲೇ ನಡೆಸಲಾಗಿದೆ.ಬಿಳಿಯೂರು ಅಣೆಕಟ್ಟಿನಲ್ಲಿ ನೀರು ನಿಲುಗಡೆಗೊಳಿಸಲು ಮುಂದಾದರೆ ಪುತ್ತೂರು ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ೩೪ ನೆಕ್ಕಿಲಾಡಿಯ ಕಿಂಡಿ ಅಣೆಕಟ್ಟು ಸಹಜವಾಗಿ ಮುಳುಗಡೆಯಾಗಲಿದೆ. ಅದೇ ರೀತಿ ಗುರುವಾಯನಕೆರೆ ಸಹಿತ ಬಹು ಗ್ರಾಮಗಳಿಗೆ ನೀರು ಹಾಯಿಸುವ ಮೊಗ್ರು ಗ್ರಾಮದ ಮುಗೇರಡ್ಕ ಅಣೆಕಟ್ಟು ಹಾಗೂ ಬಜತ್ತೂರು ಗ್ರಾಮದ ನೀರಕಟ್ಟೆ ವಿದ್ಯುತ್ ಉತ್ಪಾದನಾ ಕೇಂದ್ರದ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆರಂಭವಾದಲ್ಲಿ ಬಿಳಿಯೂರಿನ ಅಣೆಕಟ್ಟಿಗೆ ನೀರಿನ ಹರಿವು ಇಳಿಮುಖವಾಗುವ ಸಾಧ್ಯತೆಯಿದೆ. ನದಿಯಲ್ಲಿ ನೀರಿನ ಹರಿಯುವಿಕೆ ಗಣನೀಯವಾಗಿ ಇಳಿದ ಕಾರಣ ಹಾಗೂ ಒಣ ವಾತಾವರಣ ಮುಂದುವರೆದ ಕಾರಣ ನೀರಿನ ಸಂಗ್ರಹದ ದೃಷ್ಠಿಯಿಂದ ಈಗಾಗಲೇ ಗೇಟು ಅಳವಡಿಸಲು ಮುಂದಾಗಿದ್ದೆವು. ಆದರೆ ಕೆಲ ದಿನಗಳಿಂದ ಈ ಪರಿಸರದಲ್ಲಿ ಮಳೆಯಾಗುತ್ತಿರುವುದರಿಂದ ಗೇಟು ಅಳವಡಿಕೆಯ ಕಾರ್ಯವನ್ನು ಮುಂದೂಡಿದ್ದೇವೆ. ಹಿಂಗಾರು ಮಳೆ ಚೆನ್ನಾಗಿ ಸುರಿದರೆ ಗೇಟನ್ನು ಎಂದಿನಂತೆ ನಿಗದಿತ ಅವಧಿಯಲ್ಲಿಯೇ ಹಾಕಲಾಗುವುದು. ಮಳೆ ಕಣ್ಮರೆಯಾದರೆ ಯಾವುದೇ ಸಮಯದಲ್ಲಿ ಗೇಟು ಹಾಕುತ್ತೇವೆ. ಎಇ ತಾಜುದ್ದೀನ್ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಜಿಲ್ಲೆಯ ಎಲ್ಲ ಕಿಂಡಿ ಅಣೆಕಟ್ಟುಗಳಿಗೆ ಸಕಾಲದಲ್ಲಿ ಹಲಗೆ ಅಳವಡಿಸಿ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ದಿಗೆ ಗಮನಹರಿಸಬೇಕು. ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡರೂ ನೀರಕಟ್ಟೆ ಜಲವಿದ್ಯುತ್ ಸ್ಥಾವರದ ಅಣೆಕಟ್ಟಿನಲ್ಲಿಯೂ ನೀರಿನ ಸಂಗ್ರಹಕ್ಕೆ ಗಮನಹರಿಸಬೇಕು