ಕನ್ನಡಪ್ರಭ ವಾರ್ತೆ, ತುಮಕೂರು
ಮುಂಜಾನೆಯೇ ಮಹಿಳೆಯರು ತಮ್ಮ ತಮ್ಮ ಮನೆಗಳ ಬಾಗಿಲಲ್ಲಿ ಮೊರಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಗೌರಿ ಹಬ್ಬ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಂತರ ಮನೆಯಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.ಮನೆಯಲ್ಲಿ ಪೂಜೆ, ವ್ರತ ಆಚರಣೆ ಬಳಿಕ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಗೌರಿ ಮೂರ್ತಿ ಪೂಜಿಸಿ ಬಾಗಿನ ಅರ್ಪಿಸಲು ಸಿದ್ದತೆ ಮಾಡಲಾಗಿದ್ದ ದೇವಾಲಯಗಳಿಗೆ ತೆರಳಿದ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.
ಈ ಎಲ್ಲ ದೇವಾಲಯಗಳಲ್ಲೂ ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಮುಂಜಾನೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಸುಮಂಗಲಿಯರು ತವರಿನಿಂದ ಬಂದಂತಹ ಬಾಗಿನವನ್ನು ಗೌರಿ ಅರ್ಪಿಸಿದ್ದಲ್ಲದೆ, ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ನೀಡುವ ಮೂಲಕ ಹಬ್ಬದ ಸೊಬಗನ್ನು ಸಂಭ್ರಮಿಸಿದರು.ಗೌರಿ ಮೂರ್ತಿ, ಮೊರ, ಹೂವು, ಹಣ್ಣು, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಎಷ್ಟೇ ದುಪ್ಪಟ್ಟಾದರೂ ಅದನ್ನು ಲೆಕ್ಕಿಸದೆ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ಜಿಲ್ಲೆಯಾದ್ಯಂತ ಕಂಡು ಬಂತು.