ಗೌತಮ್‌ ಅದಾನಿ ಹುಟ್ಟುಹಬ್ಬ: ಉಡುಪಿ ಟಿಪಿಪಿ ಸ್ಥಾವರದಲ್ಲಿ ರಕ್ತದಾನ ಶಿಬಿರ

KannadaprabhaNewsNetwork |  
Published : Jun 25, 2025, 11:47 PM IST
25ಅದಾನಿ | Kannada Prabha

ಸಾರಾಂಶ

ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ‘ಗೋ-ರೆಡ್’ ಬೃಹತ್ ರಕ್ತದಾನ ಶಿಬಿರ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಕಾಪುಇಲ್ಲಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ‘ಗೋ-ರೆಡ್’ ಬೃಹತ್ ರಕ್ತದಾನ ಶಿಬಿರ ಆಯೋಜಿಸಿತು. ಅದಾನಿ ಸಮೂಹದ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ಈ ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ.ವೀಣಾಕುಮಾರಿ, ಅದಾನಿ ಸಮೂಹದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಆಳ್ವ ಅವರು, ಅದಾನಿ ಪ್ರತಿಷ್ಟಾನವು ದೇಶದೆಲ್ಲೆಡೆ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಅದಾನಿ ಸಮೂಹದ ಸ್ಥಾಪಕ ಗೌತಮ್ ಅದಾನಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಜೂ.೨೪ ರಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದು, ಸಾವಿರಾರು ರಕ್ತ ಸಂಗ್ರಹವಾಗುತ್ತಿದೆ. ಅದಾನಿ ಪವರ್ ಲಿಮಿಟೆಡ್, ಉಡುಪಿ ಸಂಸ್ಥೆಯಲ್ಲಿ ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಕೂಡ ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಹರ್ಷಕರ ಸಂಗತಿ ಎಂದು ಹೇಳಿದರು.

ಡಾ.ವೀಣಾ ಅವರು ರಕ್ತದಾನದ ಮಹತ್ವದ ಬಗ್ಗೆ ವಿವರಿಸುತ್ತಾ, ಸತತವಾಗಿ ೧೦ ವರ್ಷಗಳಿಂದ ಪ್ರತಿ ಜೂನ್‌ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದ್ದು, ಅದಾನಿ ಸಮೂಹದ ಎಲ್ಲ ಉದ್ಯೋಗಿಗಳು ತಮ್ಮ ಸ್ವಇಚ್ಛೆಯಿಂದ ರಕ್ತದಾನ ಮಾಡುತ್ತಾ ಉಡುಪಿ ಮತ್ತು ಮಂಗಳೂರು ಜಿಲ್ಲಾ ಆಸ್ಪತ್ರೆಗಳ ರಕ್ತನಿಧಿಗೆ ನೀಡುತ್ತಿರುವುದು ಅವಿಭಜಿತ ಜಿಲ್ಲೆಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ದಿನವಿಡೀ ನಡೆದ ರಕ್ತದಾನ ಶಿಬಿರದಲ್ಲಿ ಬೃಹತ್ ಸಂಖ್ಯೆಯಲ್ಲಿ ಯುಪಿಸಿಎಲ್ ಹಾಗೂ ಇತರೆ ಕಂಟ್ರಾಕ್ಟ್ ಉದ್ಯೋಗಿಗಳು ಸ್ವಇಚ್ಚೆಯಿಂದ ಭಾಗವಹಿಸಿದ್ದು, ಒಟ್ಟು ೩೨೪ ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು, ಆಳ್ವ ಅವರು ಎಲ್ಲಾ ರಕ್ತದಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ