ಗವಿಮಠ ಪ್ರಸಾದ ನಿಲಯದ ವೆಚ್ಚ ನೀಡುವ ನಿರ್ಧಾರಕ್ಕೆ ಗೆಳೆಯರ ಸಹಾಯಸ್ತ

KannadaprabhaNewsNetwork | Published : Dec 27, 2023 1:32 AM

ಸಾರಾಂಶ

ಗವಿಮಠ ಶ್ರೀಗಳ ಗೆಳೆಯರ ಬಳಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದ ಬಳಿಕ ಸಭೆ ಸೇರಿ, ಈ ಸ್ನೇಹ ಅಜರಾಮರವಾಗಬೇಕು. ಹೀಗಾಗಿ, ಗವಿಮಠ ಶ್ರೀಗಳ ಗೆಳೆಯರ ಬಳಗ ಎನ್ನುವ ಸಹಕಾರ ಸಂಘ ಸ್ಥಾಪಿಸಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ ಕಲಾ ವಿಭಾಗದ ಅಂತಿಮ ವರ್ಷದ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಗೆಳೆಯರ ಬಳಗದ ಸದಸ್ಯರು ಗವಿಮಠ ಹಾಸ್ಟೇಲ್ ಒಂದು ದಿನದ ವೆಚ್ಚವನ್ನು ಪ್ರತಿ ವರ್ಷವೂ ನೀಡುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಹಳೆ ವಿದ್ಯಾರ್ಥಿಗಳ ನಿರ್ಧಾರಕ್ಕೆ ಗುರುಗಳು ಸಹ ಸಾಥ್ ನೀಡಲು ಮುಂದೆ ಬಂದಿರುವುದು ವ್ಯಾಪಕ ಪ್ರಸಂಶೆಗೆ ಪಾತ್ರವಾಗಿದೆ.

ಹೌದು, ಗವಿಮಠ ಶ್ರೀಗಳ ಗೆಳೆಯರ ಬಳದ ರಜತ ಸಂಭ್ರಮ ನಿಮಿತ್ತ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕರು ತಮ್ಮ ಕಾಣಿಕೆ ನೀಡಲು ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಗುರುಗಳು ಸಹ ನಾವು ಭಾಗಿಯಾಗುತ್ತೇವೆ, ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗೋಣ ಎಂದು ವಿದ್ಯಾರ್ಥಿಗಳ ಬೆನ್ನುತಟ್ಟಿದ್ದಾರೆ.

ಸರ್ಕಾರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ವೀರೇಶ ಕಾತರಕಿ ಅವರು ವಿದ್ಯಾರ್ಥಿಗಳ ಈ ನಿರ್ಧಾರ ಬೆಂಬಲಿಸಿ ನನಗೂ ಸಹ ಇಂಥ ಅಮೂಲ್ಯ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಪ್ರತಿ ವರ್ಷವೂ ನಾನು ಸಹ ಇದರಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.

ಇನ್ನು ವಿವಿಧೆಡೆ ನಾನಾ ಕರ್ತವ್ಯದಲ್ಲಿರುವ ಹಾಗೂ ವಾಣಿಜ್ಯೋದ್ಯಮಿಗಳು ಆಗಿರುವವರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ನಾನಾ ಕಾರಣಗಳಿಂದ ನಮಗೆ ಬರಲು ಆಗಿಲ್ಲ. ಆದರೆ, ಇಂಥ ಮಹಾನ್ ಕಾರ್ಯಕ್ಕೆ ನಾವು ಸದಾ ಸಿದ್ದರಿದ್ದೇವೆ ಎಂದು ಬೆಂಬಲಿಸಿದ್ದಾರೆ.

ಹುಟ್ಟಿಕೊಳ್ಳಲಿದೆ ಸಂಘ: ಗವಿಮಠ ಶ್ರೀಗಳ ಗೆಳೆಯರ ಬಳಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದ ಬಳಿಕ ಸಭೆ ಸೇರಿ, ಈ ಸ್ನೇಹ ಅಜರಾಮರವಾಗಬೇಕು. ಹೀಗಾಗಿ, ಗವಿಮಠ ಶ್ರೀಗಳ ಗೆಳೆಯರ ಬಳಗ ಎನ್ನುವ ಸಹಕಾರ ಸಂಘ ಸ್ಥಾಪಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಗೆಳೆಯರು ಸಂಕಷ್ಟದಲ್ಲಿ ಇದ್ದರೇ, ಆರೋಗ್ಯ ಸಮಸ್ಯೆಯಾದರೆ ಅವರಿಗೆ ಸಹಾಯ ಮಾಡುವ ದಿಸೆಯಲ್ಲಿಯೂ ನಿಧಿ ಸಂಗ್ರಹಿಸುವ ನಿರ್ಧಾರದ ಕುರಿತು ಚರ್ಚೆ ಮಾಡಿ ಸಮ್ಮತಿ ಸೂಚಿಸಿದ್ದಾರೆ.ಗೌರವ ಸಲ್ಲಿಸಿದ ಗವಿಮಠ ಶ್ರೀಗಳು: ತಾವೂ ಪದವಿ ಓದುವಾಗಿನ ಗುರುಗಳ ಸನ್ಮಾನ ಕಾರ್ಯಕ್ರದಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲವೂ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎದ್ದುಕೊಂಡೇ ನಿಂತಿದ್ದರು. ಪ್ರತಿಯೊಬ್ಬ ಗುರುಗಳ ಸನ್ಮಾನ ಕಾರ್ಯಕ್ರಮ ಮುಗಿಯುವವರೆಗೂ ಒಂದು ಕ್ಷಣವೂ ಕುಳಿತುಕೊಳ್ಳದೆ ಗೌರವ ಸಲ್ಲಿಸಿದರು. ಗುರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಕ್ಷರಶಃ ಭಾವುಕರಾಗಿದ್ದರು ಶ್ರೀಗಳು.ನಾಲ್ಕು ವರ್ಷಗಳ ಪ್ರಯತ್ನ: 1997-98ನೇ ಸಾಲಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ಗವಿಮಠದ 18ನೇ ಪೀಠಾಧಿಪತಿ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಗೆಳೆಯರ ಬಳಗವನ್ನು ಸೇರಿಸಬೇಕು, ಸ್ನೇಹ ಸಮ್ಮಿಲನ ಮಾಡಬೇಕು ಎಂದು ಕಳೆದ ನಾಲ್ಕು ವರ್ಷಗಳ ಪ್ರಯತ್ನ ಮಾಡಲಾಗಿದೆ. 25 ವರ್ಷಗಳ ಬಳಿಕ ಗೆಳೆಯರನ್ನು ಒಂದೆಡೆ ಸೇರಿಸಲು ಶ್ರೀಶೈಲ ಅಳವಂಡಿ, ಕನಕಪ್ಪ ಉಪ್ಪಾರ, ಶಂಭು ಪಾಟೀಲ್, ಗುರು ಬೂದಗುಂಪಾ, ರಾಜು ಕಬಾಡೆ, ಗಿರಿಜಾ ಮಲ್ಲಿಗಿಹಾಳ, ರಾಚಮ್ಮ, ವಿಜಯಲಕ್ಷ್ಮಿ ಬಳ್ಳೊಳ್ಳಿ, ಸುಮಂಗಲಾ ಸಜ್ಜನ, ಚಂದ್ರ ಕವಲೂರು ಸೇರಿದಂತೆ ಅನೇಕರು ನಾಲ್ಕು ವರ್ಷಗಳಿಂದ ಶ್ರಮಿಸಿದ್ದಾರೆ.

Share this article