ಮಿಯಾವಾಕಿ ಮಾದರಿ ಅರಣ್ಯಾಭಿವೃದ್ಧಿಗೆ ಗವಿಶ್ರೀ ಮುಂದಡಿ

KannadaprabhaNewsNetwork |  
Published : Jun 05, 2025, 01:28 AM IST
4ಕೆಪಿಎಲ್22 ಕೊಪ್ಪಳ ತಾಲೂಕಿನ ಕೋಳೂರು – ಕಾಟ್ರಳ್ಳಿ ಗ್ರಾಮದ ಬಳಿ ಗವಿಮಠ ಗುರುಕುಲ ಸಂಸ್ಥೆಯ ಆವರಣದಲ್ಲಿ 25 ಸಾವಿರ ಗಿಡಗಳನ್ನು ನೆಡುವುದಕ್ಕೆ ಸಿದ್ಧತೆ ಮಾಡಿಕೊಂಡಿರುವುದು. | Kannada Prabha

ಸಾರಾಂಶ

ಏಪ್ರಿಲ್‌ 1ರಂದು ಮೂರ್ಖರ ದಿನ ಆಚರಿಸುವುದಕ್ಕಿಂತ ಜೂ.5ರಂದು ಪ್ರತಿಯೊಬ್ಬರು ಒಂದೇ ಒಂದು ಗಿಡ ಹಚ್ಚಿದರೆ ಸಾಕು ಏಪ್ರಿಲ್ ಕೂಲ್ ಆಗುತ್ತದೆ. ಮೂರು ಅಡಿ ಗುಂಡಿ ತೋಡಿ ಒಂದು ಸಣ್ಣ ಸಸಿ ಹಚ್ಚಿದ್ದರೆ, ಇಂದು ನೀರಿಗಾಗಿ ನೂರಾರು ಅಡಿ ಆಳವಾದ ಗುಂಡಿ ತೋಡುವ ಪ್ರಸಂಗವೇ ಬರುತ್ತಿರಲಿಲ್ಲ ಎನ್ನುವ ತತ್ವದಡಿ ಸಸಿಗಳನ್ನು ನೆಡಲಾಗುತ್ತದೆ.

ಕೊಪ್ಪಳ:

ಅನ್ನದಾಸೋಹದ ಜತೆಗೆ ಸಸ್ಯ ದಾಸೋಹ ಪ್ರಾರಂಭಿಸಿರುವ ಗವಿಸಿದ್ಧೇಶ್ವರ ಸ್ವಾಮೀಜಿ ಜೂ. 5ರಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮಿಯಾವಾಕಿ ಮಾದರಿ ಅರಣ್ಯ ಅಭಿವೃದ್ಧಿಗೆ ಮುಂದಾಗಿದ್ದಾರೆ.

ತಾಲೂಕಿನ ಕೋಳೂರು-ಕಾಟ್ರಳ್ಳಿ ಗ್ರಾಮಗಳ ಬಳಿ ಗವಿಸಿದ್ಧೇಶ್ವರ ಸಂಸ್ಥಾನದ ಗವಿಮಠ ಗುರುಕುಲ ಶಿಕ್ಷಣ ಸಂಸ್ಥೆಯ 45 ಎಕರೆ ವ್ಯಾಪ್ತಿಯಲ್ಲಿ 25 ಸಾವಿರ ಸಸಿಗಳನ್ನು ಮಿಯಾವಾಕಿ ಮಾದರಿಯಲ್ಲಿ ಬೆಳೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 9ಕ್ಕೆ ಸಸಿ ನೆಡುವ ಕಾರ್ಯಕ್ರಮಕ್ಕ ಚಾಲನೆ ನೀಡಲಿದ್ದಾರೆ.

ಏನಿದು ಮಿಯಾವಾಕಿ?

ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ಪ್ರತಿ ಚದರ ಮೀಟರ್‌ಗೆ ೩-೪ ಸಸ್ಯ ನೆಟ್ಟು ದಟ್ಟವಾಗಿ ಬೆಳೆಸಿ ಅರಣ್ಯೀಕರಣ ಅಭಿವೃದ್ಧಿಪಡಿಸಿದರು. ಇವು ಸಾಂಪ್ರದಾಯಿಕ ಕಾಡುಗಳಿಗಿಂತ ೧೦ ಪಟ್ಟು ವೇಗವಾಗಿ ಬೆಳೆಯುತ್ತವೆ. ೧೦೦ ಪಟ್ಟು ಹೆಚ್ಚು ಜೀವ ವೈವಿಧ್ಯತೆಯನ್ನು ಸಂರಕ್ಷಿಸುತ್ತದೆ. ೪೦ ಪಟ್ಟು ಹೆಚ್ಚು ಇಂಗಾಲವನ್ನು ಹೀರಿಕೊಂಡು ಅತಿ ಹೆಚ್ಚು ಆಮ್ಲಜನಕ ಹೊರಬಿಡುತ್ತವೆ. ಗಿಡಗಳ ನಡುವಿನ ಅಂತರ ಕಡಿಮೆ ಇರುವುದರಿಂದ ಒಂದು ಸಸ್ಯ ಇನ್ನೊಂದು ಸಸ್ಯದ ಜತೆಗೆ ಸೂರ್ಯನ ಬೆಳಕಿಗಾಗಿ ಸ್ಪರ್ಧೆ ಏರ್ಪಟ್ಟು ಅವುಗಳು ಅತ್ಯಂತ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಮಿಯಾವಾಕಿ ಅವರು ಏಷ್ಯಾದ್ಯಂತ ೧೭೦೦ಕ್ಕೂ ಅಧಿಕ ಸೂಕ್ಷ್ಮ ಅರಣ್ಯಗಳನ್ನು ಸೃಷ್ಟಿಸಿದ್ದಾರೆ. ಅನೇಕ ಜನ ಈ ವಿಧಾನ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಈ ವಿಧಾನ ಮಿಯಾವಾಕಿಯೆಂದು ಪ್ರಚಲಿತವಾಗಿದೆ. ಈ ಮಿಯಾವಾಕಿ ಮಾದರಿಯಡಿಯಲ್ಲಿಯೇ ಗವಿಮಠ ಗುರುಕುಲ ಶಿಕ್ಷಣ ಸಂಸ್ಥೆಯ 45 ಎಕರೆ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಏಪ್ರಿಲ್‌ 1ರಂದು ಮೂರ್ಖರ ದಿನ ಆಚರಿಸುವುದಕ್ಕಿಂತ ಜೂ.5ರಂದು ಪ್ರತಿಯೊಬ್ಬರು ಒಂದೇ ಒಂದು ಗಿಡ ಹಚ್ಚಿದರೆ ಸಾಕು ಏಪ್ರಿಲ್ ಕೂಲ್ ಆಗುತ್ತದೆ. ಮೂರು ಅಡಿ ಗುಂಡಿ ತೋಡಿ ಒಂದು ಸಣ್ಣ ಸಸಿ ಹಚ್ಚಿದ್ದರೆ, ಇಂದು ನೀರಿಗಾಗಿ ನೂರಾರು ಅಡಿ ಆಳವಾದ ಗುಂಡಿ ತೋಡುವ ಪ್ರಸಂಗವೇ ಬರುತ್ತಿರಲಿಲ್ಲ ಎನ್ನುವ ತತ್ವದಡಿ ಸಸಿಗಳನ್ನು ನೆಡಲಾಗುತ್ತದೆ. ಜೂ. ೫ರಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗವಿಮಠವು ಅರಣ್ಯ ಇಲಾಖೆ, ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಐಎಲ್‌ವೈಎಫ್ ಸಂಘಟನೆ ಸಹಯೋಗದೊಂದಿಗೆ ೪೫ ಎಕರೆ ಭೂ ಪ್ರದೇಶದಲ್ಲಿ ೨ ಕಿಲೋ ಮೀಟರ್ ಉದ್ದ ೧೨ ಅಡಿ ಅಗಲ ಮಿಯಾವಾಕಿಯ ವಿಧಾನ ಅನುಸರಿಸಿ ಕಾಯಾ, ಬೇವು, ಬನ್ನಿ, ಹಲಸು, ಆಲ, ಅರಳಿ, ಬಿದಿರು, ಹೊಂಗೆ, ನೆರಳೆ, ಪಾರಿಜಾತ, ತೇಗ, ಹೊಳೆಮತ್ತಿ, ಗುಲಮೊಹರ್, ಕದಂಬ, ಮಾವು, ತಬುಬಿಯಾ, ಜಕರಂಡಾ, ಮಹಾಘನಿ, ಅಂಟವಾಳ ಈ ರೀತಿ ಇತರೆ ೬೦ ಬಗೆಯ ೨೫೦೦೦ಕ್ಕೂ ಅಧಿಕ ಸಸಿ ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗವಿಮಠ ಪ್ರಕಟಣೆಯಲ್ಲಿ ತಿಳಿಸಿದೆ.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು