ಕಾರಟಗಿ:
ಗ್ರಾಪಂ ಸದಸ್ಯೆ ರೇಣುಕಾ ಸುಬೇದಾರ, ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಜಯಕುಮಾರ ರಾಘವಲು ಅವರ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಸದಸ್ಯೆ ರೇಣುಕಾ, ಸರ್ಕಾರದ ನಿಯಮ ಉಲ್ಲಂಘಿಸಿ, ತಮ್ಮ ಮೈದುನನಿಗೆ (ಪತಿಯ ತಮ್ಮ) ಕಾಮಗಾರಿ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಹಾಲಿ ಸದಸ್ಯ ಹಾಗೂ ಈ ಹಿಂದಿನ ಅಧ್ಯಕ್ಷ ವಿಜಯಕುಮಾರ ಮೃತರ ಹೆಸರಿನಲ್ಲಿ ಹಾಗೂ ಅರೆ ಸರ್ಕಾರಿ ನೌಕರರ ಹೆಸರಿನಲ್ಲಿ ನರೇಗಾ ಕೂಲಿ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾರಟಗಿ ತಾಪಂ ಇಒ ಮತ್ತು ಜಿಪಂ ಸಿಇಒ ಅವರು ಸದಸ್ಯರ ಸ್ಥಾನ ರದ್ದು ಮಾಡುವಂತೆ ಕೋರಿ, ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಎದುರುದಾರರಿಗೆ ನೋಟಿಸ್ ನೀಡಿ, ವಿಚಾರಣೆ ಕೈಗೊಂಡ ನಂತರ, ವಿಭಾಗೀಯ ಆಯುಕ್ತರು, ಸದಸ್ಯತ್ವ ರದ್ದು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು.ವಿಭಾಗೀಯ ಆಯುಕ್ತರ ಪ್ರಸ್ತಾವನೆ ಆಧರಿಸಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಈ ಇಬ್ಬರ ಸದಸ್ಯತ್ವ ಸ್ಥಾನ ರದ್ದು ಮಾಡಿ ಆದೇಶಿಸಿದ್ದಾರೆ.