- ಪ್ರತಿಯೊಬ್ಬ ರೈತರು ಭಾಗವಹಿಸಬೇಕು: ಎಂ.ಎನ್. ನಾಗೇಶ್ ಮನವಿ
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಜೂ.9 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.
ಬುಧವಾರ ಪಟ್ಟಣದ ಬಸ್ತಿಮಠದ ಮಹಾ ವೀರ ಭವನದಲ್ಲಿ ಬೃಹತ್ ರೈತ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಮಲೆನಾಡಿನಲ್ಲಿ ರೈತ ಮತ್ತು ಅರಣ್ಯ ಇಲಾಖೆ ನಡುವೆ ಇರುವ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಒತ್ತಾಯಿಸಿ ರೈತ ಸಮಾವೇಶ ಹಮ್ಮಿಕೊಂಡಿದ್ದೇವೆ. ಜೂ.9 ರಂದು ಬೆಳಿಗ್ಗೆ 10.30 ಗಂಟೆಗೆ ಚಿಕ್ಕಮಗಳೂರು ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದೆ. ಆಜಾದ್ ಪಾರ್ಕನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದರು.ಅಲ್ಲದೆ ರೈತ ಸಂಘಟನೆ ಎಲ್ಲಾ ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಘೋಷಣೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಶೃಂಗೇರಿ ಕ್ಷೇತ್ರ ಹಾಗೂ ಖಾಂಡ್ಯ ಹೋಬಳಿಯಿಂದ 2,500 ರೈತರು, ನಾಗರಿಕರು ಭಾಗವಹಿಸುವ ನಿರೀಕ್ಷೆ ಇದೆ. ರೈತರ ಹೋರಾಟದಲ್ಲಿ ಎಲ್ಲಾ ರಾಜಕೀಯ ಪಕ್ಷದವರು, ವಿವಿಧ ಸಂಘ ಸಂಸ್ಥೆಗಳು, ಮಹಿಳೆಯರು ಭಾಗವಹಿಸಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ರೈತರಿಗೆ ಈ ಸಮಾವೇಶ ಬಗ್ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿಯ ತಾ.ಕಾರ್ಯದರ್ಶಿ ಗಡಿಗೇಶ್ವರ ರತ್ನಾಕರ, ಶೃಂಗೇರಿ ಕ್ಷೇತ್ರ ಉಪಾಧ್ಯಕ್ಷ ನವೀನ್ ಕರಗಣೆ, ಸಮಿತಿ ಮುಖಂಡರಾದ ಎಚ್.ಡಿ. ಲೋಕೇಶ್,ಎನ್.ಡಿ.ಪ್ರಸಾದ್, ಅರುಣ್ ಜೈನ್, ಕಾರ್ತಿಕ್, ಕೌಸಿಕ್,ಮದನ್ ಇದ್ದರು.
ಅರ್ಜಿಗಳಿಗೆ ಸಾಗುವಳಿ ಚೀಟಿ