ಗವಿಶ್ರೀಗಳಿಂದ ಮೌನಕ್ರಾಂತಿಯೊಂದಿಗೆ ಸಮಾಜಮುಖಿ ಕಾರ್ಯ

KannadaprabhaNewsNetwork | Published : Mar 24, 2025 12:36 AM

ಸಾರಾಂಶ

ಗವಿಮಠಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮೌನಕ್ರಾಂತಿಯೊಂದಿಗೆ ನಡೆಸುತ್ತಿದ್ದಾರೆ

ಕೊಪ್ಪಳ: ನಗರದ ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ,ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಲಿಂ.ಶ್ರೀ ಶಿವಶಾಂತವೀರ ಶಿವಯೋಗಿಗಳ ಪುಣ್ಯಾರಾಧನೆಯ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಶ್ರೀಗವಿಸಿದ್ಧೇಶ್ವರ ಅಜ್ಜನ ಜಾತ್ರೆ ಧ್ಯೇಯ ವಿಕಲಚೇತನ ನಡೆ ಸಕಲಚೇತನ ಕಡೆಯ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಕೃತಕ ಅಂಗಾಂಗ ವಿತರಣೆ ಕಾರ್ಯಕ್ರಮ ಜರುಗಿತು.

ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ ನ ನಿರ್ದೇಶಕ ಮಹೇಂದ್ರ ಸಿಂಘ್ವಿ ಮಾತನಾಡಿ, ಗವಿಮಠದಿಂದ ನಡೆಸಿದ ಸುಮಾರು ೩೫೦ ಶಿಬಿರಗಳಲ್ಲಿ ಇದು ವಿಭಿನ್ನವಾದುದು. ಗವಿಮಠಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮೌನಕ್ರಾಂತಿಯೊಂದಿಗೆ ನಡೆಸುತ್ತಿದ್ದಾರೆ ಎಂದರು. ಉಪ ಪೊಲೀಸ್‌ ಅಧೀಕ್ಷಕ ಮುತ್ತಣ್ಣ ಸವರಗೋಳ ಮಾತನಾಡಿ, ಸಮಾಜದ ಕಾರ್ಯವೈಖರಿ ನಡೆಸಲು ಗವಿಶ್ರೀಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸೋಮರೆಡ್ಡಿ ಅಳವಂಡಿ ಮಾತನಾಡಿ, ವಿಕಲಚೇತನರಿಗೆ ಜೀವನ ನೀಡುವುದು ಬಹುದೊಡ್ಡ ಕೆಲಸ. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸಾಮಾಜಿಕ ಕೆಲಸ ಹಲವಾರು ರೀತಿಯಲ್ಲಿ ಮಾಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ಸಂಸ್ಥೆಯಿಂದ ಒಂದು ವಿಕಲಚೇತನ ಚಿಕ್ಕ ಮಗುವಿನ ಜೀವನ ಸುಗಮವಾಗಿರಲು ಅವಳನ್ನು ದತ್ತು ಪಡೆಯಲು ಮುಂದಾಗಿದೆ ಎಂದರು.

ಮಹಾವಿದ್ಯಾಲಯದ ಚೇರಮನ್‌ ಸಂಜಯ ಕೊತಬಾಳ ಮಾತನಾಡಿ, ವಿಕಲಚೇತನರ ಬದುಕು ಕಠಿಣವಾದುದು.ಅವರಿಗೆ ನೆರವಾಗಲು ಕೈ ಜೋಡಿಸಿದರೆ ಅದು ನಿಜವಾದ ಸಕಲಚೇತನ ಕಾರ್ಯಕ್ರಮದ ಸಾರ್ಥಕತೆ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಂತೇಶ ಸಾಲಿಮಠ ಮಾತನಾಡಿ, ಗವಿಮಠವು ಇನ್ನೂ ಅನೇಕ ವಿಶೇಷ ಕಾರ್ಯಕ್ರಮ ಜನರ ಹಿತಕ್ಕಾಗಿ ಹಮ್ಮಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದರು.

ಉಚಿತ ಕೃತಕ ಅಂಗಾಂಗ ವಿತರಣೆಯನ್ನು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀಮಹಾವೀರ ಲಿಂಬ್ ಸೆಂಟರ್ ಹುಬ್ಬಳ್ಳಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಒಟ್ಟು ೪೭ ಜನರಿಗೆ ಮಾಡಲಾಯಿತು. ಬೃಹತ್ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು.

ಯಲಬುರ್ಗಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಮಹೇಶ ಮುದುಗಲ್, ಡಾ. ಸಿ.ಎಸ್. ಕರಮುಡಿ, ಉಪಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ, ಸತೀಶ ಅಗಡಿ, ಡಾ. ಗವಿ ಪಾಟೀಲ, ಡಾ. ಜೀತೇಂದ್ರ ಇತರರಿದ್ದರು.

Share this article