ಎಲ್ಲಾ ಅಂಗಾಂಗಗಳಂತೆ ಕಿವಿಯೂ ಮಹತ್ವದ ಅಂಗ

KannadaprabhaNewsNetwork | Published : Mar 24, 2025 12:36 AM

ಸಾರಾಂಶ

ರಾಮನಗರ: ಕಿವಿ ಸಮಸ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಇದೆ. ಎಲ್ಲಾ ಅಂಗಾಂಗಗಳಂತೆ ಕಿವಿ ಕೂಡ ಮಹತ್ವದ ಅಂಗವಾಗಿದೆ. ಕಿವಿಯ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಶಾಶ್ವತ ಕಿವುಡರಾಗುವ ಸಂಭವವಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ಕಿವಿ ಸಮಸ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಇದೆ. ಎಲ್ಲಾ ಅಂಗಾಂಗಗಳಂತೆ ಕಿವಿ ಕೂಡ ಮಹತ್ವದ ಅಂಗವಾಗಿದೆ. ಕಿವಿಯ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಶಾಶ್ವತ ಕಿವುಡರಾಗುವ ಸಂಭವವಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಶ್ರೀ ಶಾರದಾಂಬ ದೇವಾಲಯದ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಮನಗರ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರವಣ ದೋಷವಿರುವವರಿಗೆ ಉಚಿತ ಶ್ರವಣ ಉಪಕರಣಗಳನ್ನು ವಿತರಿಸಿ ಮಾತನಾಡಿದರು.

ಸಾಮಾನ್ಯವಾಗಿ ಶ್ರವಣದೋಷ ಸಮಸ್ಯೆ ವಯಸ್ಕರಲ್ಲಿ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಲ್ಲೇ ಕಂಡು ಬರುತ್ತಿರುವುದು ಆತಂಕದ ಸಂಗತಿ. ಮತ್ತೊಂದೆಡೆ ವಿಪರೀತ ವಾಹನಗಳ ಕರ್ಕಶ ಧ್ವನಿ ಹಾಗೂ ಮೆರವಣಿಗೆ, ಜಾಥಾದಲ್ಲಿ ಬಳಸುವಂತ ಡಿಜೆಗಳ ಅತಿಯಾದ ಶಬ್ದರಿಂದ ಕಿವುಡತನ ಸಂಭವಿಸಬಹುದು ಎಂದು ಹೇಳಿದರು.

ಆಧುನಿಕ ಯುಗದಲ್ಲಿ ಮನುಷ್ಯನ ಶರೀರಕ್ಕೆ ಮೊಬೈಲ್‌ನಿಂದಲೂ ಆಪತ್ತುಗಳಿವೆ. ದೂರಪ್ರಯಾಣ ಅಥವಾ ಬೈಕ್ ರೈಡ್ ಗಳಲ್ಲಿ ಇಂದಿನ ಯುವ ಸಮೂಹ ವಿಪರೀತ ಧ್ವನಿಯಿಂದ ಗಂಟೆಗಟ್ಟಲೇ ಹೇರ್ ಪೋನ್ ಬಳಕೆ ಮಾಡುವುದರಿಂದ ಕಿವಿ ತಮಟೆಗೆ ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಯುವಕರು ಎಚ್ಚೆತ್ತು ಬಳಕೆಗೆ ಬೇಕಾದಷ್ಟು ಮಾತ್ರ ಉಪಯೋಗಿಸಬೇಕು ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವದಲ್ಲೇ ವಿಶಿಷ್ಟವಾದ ಸೇವಾ ಸಂಸ್ಥೆಯಾಗಿದೆ. ಕೋವಿಡ್ ಸಮಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಮಾಡಿದ ಸೇವೆ ಅನನ್ಯವಾದುದು. ಶ್ರವಣ ದೋಷವಿರುವವರಿಗೆ ಉಚಿತ ಶ್ರವಣ ಉಪಕರಣಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶೇಷಾದ್ರಿ ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕುಮಾರ್ ಮಾತನಾಡಿ, ಶ್ರವಣ ದೋ‍‍ಷವಿರುವವರಿಗೂ ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳು ಹಾಗೂ ಮಾಸಿಕ ಗೌರವಧನ ನೀಡಲಾಗುತ್ತಿದೆ. ಮಾನವನ ದೇಹದಲ್ಲಿ ಮೂಳೆಯಿಲ್ಲದ ಅಂಗ ಕಿವಿಗಳು. ಕನಿಷ್ಟ ಮೂರು ತಿಂಗಳಿಗೊಮ್ಮೆ ಕಿವಿ ಸ್ವಚ್ಛಗೊಳಿಸುವುದು. ಸಣ್ಣಪುಟ್ಟ ಸಮಸ್ಯೆಗಳು ಎದುರಾದರೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನೇಚೋರಾಮ ಔಷಧ ತಯಾರಿಕಾ ಕಂಪನಿಯ ನಿರ್ದೇಶಕ ಎಚ್.ಶ್ರೀನಿವಾಸ್ ಮಾತನಾಡಿ, ಇತ್ತೀಚಿಗೆ ಕಿವುಡುತನ ಸಾಮಾನ್ಯವಾಗಿದೆ. ಅಲ್ಪಸ್ವಲ್ಪ ಕೇಳುವಿಕೆಯಲ್ಲಿ ಸಮಸ್ಯೆಯಿಲ್ಲ ಎಂದು ಜನತೆ ಸುಮ್ಮನಾಗುತ್ತಾರೆ. ದೊಡ್ಡಮಟ್ಟಿನ ಸಮಸ್ಯೆ ಕಂಡುಬಂದರೆ ವೈದ್ಯರ ಬಳಿಗೆ ಹೋಗುತ್ತಾರೆ. ಸಣ್ಣಪುಟ್ಟ ಕಿವಿಯ ಸಮಸ್ಯೆಗಳು ಉಲ್ಬಣಿಸಿದಾಗ ಶೀಘ್ರವೇ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪಸಭಾಪತಿ ವಿ.ಬಾಲಕೃಷ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿವಿಧ ರೀತಿಯ ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಜನರಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಯ್ದ 25 ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಚ್.ವಿ.ಶೇಷಾದ್ರಿ ಅಯ್ಯರ್, ಖಜಾಂಚಿ ಎಂ. ಪರಮಶಿವಯ್ಯ, ಕಾರ್ಯದರ್ಶಿ ಎಸ್.ರುದ್ರೇಶ್ವರ, ಸದಸ್ಯರಾದ ನರೇಂದ್ರ, ರಮೇಶ್, ಶಿವಕುಮಾರ್, ವಿನಯ್, ಅಕ್ಕೂರು ರಮೇಶ್, ಅಶೋಕ ಉಪಸ್ಥಿತರಿದ್ದರು.

22ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಶ್ರೀ ಶಾರದಾಂಬ ದೇವಾಲಯದ ಆವರಣದಲ್ಲಿ ಶ್ರವಣ ದೋಷವಿರುವವರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಉಚಿತ ಶ್ರವಣ ಉಪಕರಣಗಳನ್ನು ವಿತರಿಸಿದರು.

Share this article