ಇಂದು ಗಾಯತ್ರಿ ಸಿದ್ದೇಶ್ವರ ರೋಡ್ ಶೋ

KannadaprabhaNewsNetwork |  
Published : Apr 19, 2024, 01:09 AM IST
18ಕೆಡಿವಿಜಿ1-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಏ.19ರಂದು ನಗರದಲ್ಲಿ ಬೃಹತ್ ರೋಡ್ ಶೋ ಮೂಲಕ ಜಿಲ್ಲಾಡಳಿತ ಭವನಕ್ಕೆ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿ ಪಕ್ಷದ ರಾಜ್ಯ, ಜಿಲ್ಲಾ ನಾಯಕರ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ಪಿಜೆ ಬಡಾವಣೆ ಹರಳೆಣ್ಮೆ ಕೊಟ್ರಬಸಪ್ಪ ವೃತ್ತದ ಬಳಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಏಕಕಾಲಕ್ಕೆ 3 ಕಡೆಯಿಂದ ಬೃಹತ್‌ ಮೆರವಣಿಗೆ ಆರಂಭವಾಗಲಿವೆ ಎಂದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಬಸವರಾಜ ಭೈರತಿ, ಬಿ.ಶ್ರೀರಾಮುಲು, ಜಿ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಚಿತ್ರನಟಿ ಶೃತಿ, ಸಂಸದ ಜಿ.ಎಂ.ಸಿದ್ದೇಶ್ವರ ಮತ್ತಿತರರು ಹಳೆ ಭಾಗದ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.

ದುಗ್ಗಮ್ಮ ದೇವಸ್ಥಾನದಿಂದ ಹೊರಡುವ ಮೆರವಣಿಗೆ ಎಸ್‌ಕೆಪಿ ರಸ್ತೆ, ಗಡಿಯಾರ ಕಂಬ, ರೈಲ್ವೇ ಕೆಳ ಸೇತುವೆ, ಹಳೆ ಬಸ್ಸು ನಿಲ್ದಾಣ, ಪಾಲಿಕೆ ಆವರಣದಿಂದ ಆರಂಭವಾಗಿ ಕಿತ್ತೂರು ಚನ್ನಮ್ಮ ವೃತ್ತ ತಲುಪಲಿದೆ. 2ನೇ ಮೆರವಣಿಗೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಗಿ ಎಚ್ಕೆಆರ್ ವೃತ್ತ, ಕೆಟಿಜೆ ನಗರ, ನಿಟುವಳ್ಳಿ ರಸ್ತೆ, ಶ್ರೀ ಜಯವೃತ್ತ, ಕುವೆಂಪು ರಸ್ತೆ, ಗಾಂಧಿ ವೃತ್ತ, ಹಳೆ ವಾಣಿ ಹೊಂಡ ಶೋ ರೂಂ ಬಳಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಆರಂಭವಾಗುವ ಮೆರವಣಿಗೆ 4ನೇ ಮುಖ್ಯರಸ್ತೆ ಮಾರ್ಗವಾಗಿ ಚೇತನ ಹೊಟೆಲ್‌, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ಪಾಲಿಕೆ ಮುಂಭಾಗದ ಹಳೆ ಪಿಬಿ ರಸ್ತೆಯಲ್ಲಿ ಸಾಗಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮೊದಲಿನ 2 ಮೆರವಣಿಗೆ ಜೊತೆ ವಿಲೀನವಾಗಿ ಅಲ್ಲಿಂದ ನೇರವಾಗಿ ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಅಲ್ಲಿ ಪಕ್ಷದ ನಾಯಕರಾದ ಯಡಿಯೂರಪ್ಪ ಇತರರೊಂದಿಗೆ ಮಧ್ಯಾಹ್ನ 2ಕ್ಕೆ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಸುವರು ಎಂದು ಮಾಹಿತಿ ನೀಡಿದರು.

ಮಾಜಿ ಸಚಿವರಾಜ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಪ್ರೊ.ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಮಾಜಿ ಶಾಸಕರಾದ ಜೆಡಿಎಸ್‌ ಮುಖಂಡ ಎಚ್.ಎಸ್.ಶಿವಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ತುಮ್ಕೋಸ್ ಶಿವಕುಮಾರ, ಜಿ.ಎಸ್.ಅನಿತಕುಮಾರ ಸೇರಿ ಅನೇಕರು ಭಾಗವಹಿಸುವರು.

ದಾವಣಗೆರೆ ಉತ್ತರ, ದಕ್ಷಿಣ, ಹರಿಹರ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ, ಜಗಳೂರು, ಮಾಯಕೊಂಡ ವಿಧಾನಗಳ ಕ್ಷೇತ್ರಗಳಿಂದ ಲಕ್ಷಾಂತರ ಮುಖಂಡರು, ಕಾರ್ಯಕರ್ತರು ಆಗಮಿಸಿ, ರೋಡ್‌ ಶೋನಲ್ಲಿ ಭಾಗವಹಿಸುವರು, ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಐತಿಹಾಸಿಕ ಮೆರವಣಿಗೆಯಲ್ಲಿ ಸಾಗುವ ಮೂಲಕ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತ್ತೊಮ್ಮೆ ನಾಮಪತ್ರ ಸಲ್ಲಿಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಬಿಜೆಪಿ, ಜೆಡಿಎಸ್‌ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು, ಹಾಲಿ-ಮಾಜಿ ಜನ ಪ್ರತಿನಿಧಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಾಜಶೇಖರ ನಾಗಪ್ಪ ಮನವಿ ಮಾಡಿದರು.

ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್‌, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಎನ್.ಶಿವಕುಮಾರ, ಗೋವಿಂದರಾಜ, ದಂಡಪಾಣಿ, ಟಿಂಕರ್ ಮಂಜಣ್ಣ ಇತರರು ಇದ್ದರು.

ಎಚ್‌.ಬಿ.ಮಂಜಪ್ಪನ ಸದ್ಯದ ಪರಿಸ್ಥಿತಿ ಮೂಲವ್ಯಾಧಿ ಪೇಷಂಟ್ ಹಾಗೆ.!

- ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಹೇಳಿಕೆಗೆ ಯಶವಂತರಾವ್ ಪ್ರತಿಕ್ರಿಯೆ

ದಾವಣಗೆರೆ:ಕೆಲ ಕಡೆ ನೋವಾದರೆ ಹೇಳಿಕೊಳ್ಳಲಾಗದು. ಕೈ-ಕಾಲು ಮುರಿದು, ಆಪರೇಷನ್ ಮಾಡಿಸಿಕೊಂಡರೆ ಹೇಳಬಹುದು. ಆದರೆ, ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇವೆಂದು ಯಾರೂ ಹೇಳುವುದಿಲ್ಲ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಪರಿಸ್ಥಿತಿಯೂ ಹೀಗೆಯೇ ಇದೆ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಬಿಜೆಪಿ ಗೆದ್ದಿತೆಂದು, ತಾನು ಹರಕೆ ಕುರಿ ಆಗಲಿಲ್ಲವೆಂದು ಆಗಿನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಹೇಳಿಕೆ ನೀಡಿದ್ದಾರೆ. ಪಕ್ಷ ಬೇಧ ಹೊರತುಪಡಿಸಿ, ನಮ್ಮಿಬ್ಬರ ಪ್ರೀತಿ, ವಿಶ್ವಾಸ ಕಡಿಮೆ ಇಲ್ಲ. ನಾನು ನನ್ನ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧ, ಮಂಜಪ್ಪ ತಮ್ಮ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಸೋತ ಮಂಜಪ್ಪಗೆ ಈ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ನೀಡಬೇಕಿತ್ತು. 3 ಸಲ ಸೋತವರ ಮನೆಗೆ ಟಿಕೆಟ್ ನೀಡಲಾಗಿದೆ. ಈಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದರೂ, ಮಂಜಪ್ಪಗೆ ಯಾಕೆ ಟಿಕೆಟ್ ನೀಡಲಿಲ್ಲ? ಕಾಂಗ್ರೆಸ್ ನಾಯಕರು ಅಹಿಂದ ವರ್ಗವನ್ನು ನಿರಂತರ ಶೋಷಣೆಗೀಡು ಮಾಡುತ್ತಾ ಬಂದಿದ್ದಾರೆ. ನಮ್ಮ ಬಿಜೆಪಿ ನನಗೆ ದಾವಣಗೆರೆ ದಕ್ಷಿಣದಲ್ಲಿ 4 ಸಲ ಅವಕಾಶ ನೀಡಿ, ಎಲ್ಲ ರೀತಿ ಸಹಕಾರ ನೀಡಿತ್ತು. ಆದರೆ, 80 ಸಾವಿರ ಅಲ್ಪಸಂಖ್ಯಾತರ ಮತಗಳೇ ಅಲ್ಲಿ ಕಾಂಗ್ರೆಸ್ಸಿನ ಗೆಲುವಿಗೆ ಕಾರಣವಾಗಿದ್ದವು ಎಂದು ತಿಳಿಸಿದರು.

ಬಿಜೆಪಿ ನನಗೆ ಟಿಕೆಟ್ ನೀಡಿದಾಗ ನಮ್ಮ ಪಕ್ಷದ ನಾಯಕರ ಪೈಕಿ ಯಾರೂ ನನಗೆ ಕುತ್ತಿಗೆ ಕೊಯ್ಯಲಿಲ್ಲ. 1996ರಿಂದ ಕಾಂಗ್ರೆಸ್ ಇತಿಹಾಸ ನೋಡಿ, ದುಡ್ಡಿದ್ದವರಿಗೆ ಟಿಕೆಟ್ ನೀಡಿದೆ. ಆದರೆ, ಚನ್ನಯ್ಯ ಒಡೆಯರ್‌ಗೆ ಇದೇ ಕಾಂಗ್ರೆಸ್ ನಾಯಕರು ಏನು ಮಾಡಿದ್ದರೆಂಬ ಬಗ್ಗೆ ಮಂಜಪ್ಪ ಆಲೋಚಿಸಲಿ. ಈಗ ಕಾಂಗ್ರೆಸ್ ನಾಯಕರು ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಸೆಳೆಯುತ್ತಿದ್ದು, ಇದೇ ಕೆಲಸ ಮಂಜಪ್ಪ ಸ್ಪರ್ಧಿಸಿದ್ದ ವೇಳೆ ಯಾಕೆ ಮಾಡಲಿಲ್ಲ? ಆದರೆ, ಮೂಲವ್ಯಾಧಿಗೆ ಆಪರೇಷನ್ ಆಗಿ, ತೀವ್ರ ನೋವುಂಡರೂ ಹೇಳಿಕೊಳ್ಳಲಾಗದ ಸ್ಥಿತಿ ಎಚ್.ಬಿ.ಮಂಜಪ್ಪನವರದ್ದು ಎಂದು ಹೇಳಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ