ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನಿಲುಗಡೆಗೆ ಅವಕಾಶ ಇಲ್ಲದ ಕಡೆ ವಾಹನ ನಿಲ್ಲಿಸುವ, ಹೆಚ್ಚು ವಾಹನ ದಟ್ಟಣೆ ಪ್ರದೇಶಗಳಲ್ಲಿ ವಾಹನ ಕೆಟ್ಟು ನಿಂತ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ನಿವಾರಣೆ ಮಾಡಲು ಮತ್ತೆ ಟೋಯಿಂಗ್ ಆರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸಂಚಾರಿ ಪೊಲೀಸ್ ವಿಭಾಗಕ್ಕೆ ಟೋಯಿಂಗ್ ವಾಹನ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.ಐದು ನಗರ ಪಾಲಿಕೆಗಳಿಂದ ಪ್ರಾಥಮಿಕವಾಗಿ ತಲಾ ಎರಡು ಟೋಯಿಂಗ್ ವಾಹನ ಖರೀದಿಸಿ ಆಯಾ ವ್ಯಾಪ್ತಿಯ ಸಂಚಾರಿ ಪೊಲೀಸ್ ಠಾಣೆಗೆ ನೀಡಲು ನಿರ್ಧರಿಸಲಾಗಿದೆ. ತ್ವರಿತವಾಗಿ ವಾಹನ ಖರೀದಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ವಿವಿಧ ವಿಷಯಗಳ ಕುರಿತು ನಡೆದ ಸಭೆಯಲ್ಲಿ ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಟೋಯಿಂಗ್ ಮಾಡುವ ವಾಹನಗಳಿಗಾಗಿ ಪಾಲಿಕೆವಾರು ನಿರ್ದಿಷ್ಟ ಸ್ಥಳ ಗುರುತಿಸಲು ಎಲ್ಲ ನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿರು.ರಸ್ತೆ ಕತ್ತರಿಸುವವರಿಗೆ ದಂಡ ವಿಧಿಸಿ:
ರಸ್ತೆ ಕತ್ತರಿಸುವಿಕೆಗೆ ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಏಕ ಗವಾಕ್ಷಿ ಪದ್ದತಿಯಲ್ಲಿ ಅನುಮತಿ ನೀಡಬೇಕು. ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ ವಿಧಿಸುವ ಜತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರಿಂದಲೇ ಕತ್ತರಿಸಿದ ಭಾಗವನ್ನು ದುರಸ್ತಿಪಡಿಸುವಂತೆ ನಿರ್ದೇಶಿಸಿದರು.ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ:
ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ತೆರಿಗೆ ಸಂಗ್ರಹಣೆ ಹೆಚ್ಚಿಸಲು ಸೂಚಿಸಿದರು.ಖಾತಾ ಅರ್ಜಿ ತ್ವರಿತ ವಿಲೇವಾರಿಗೆ ಸೂಚನೆ:
ಜಿಬಿಎ ವ್ಯಾಪ್ತಿಯಲ್ಲಿ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವ ಅರ್ಜಿಗಳನ್ನು ಪಾಲಿಕೆವಾರು ಪರಿಶೀಲಿಸಿ, ನಿಯಮಾನುಸಾರ ಇತ್ಯರ್ಥಪಡಿಸಬೇಕು. ಇ-ಖಾತಾ ಪಡೆಯಲು ಬಂದಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿಗೆ ಸೂಚಿಸಿದರು.ರಸ್ತೆ ಗುಂಡಿಗಳನ್ನು ಮುಚ್ಚಿ:
ನಗರದ ಪ್ರಮುಖ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿನ ಬಹುತೇಕ ಗುಂಡಿಗಳು ಮುಚ್ಚಲಾಗಿದೆ. ಉಳಿದಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಸೂಚನೆ ನೀಡಿದರು. ವಾರ್ಡ್ ಮಟ್ಟದ ರಸ್ತೆಗಳಲ್ಲಿ ಕೂಡ ನಿರಂತರ ಗುಂಡಿ ಮುಚ್ಚುವ ಕಾರ್ಯ ಚಾಲ್ತಿಯಲ್ಲಿರಬೇಕು ಎಂದು ಹೇಳಿದರು.ಸಭೆಯಲ್ಲಿ ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್, ಘನತ್ಯಾಜ್ಯ ವಿಲೇವಾರಿ ಸಂಸ್ಥೆಯ ಸಿಇಒ ಕರೀಗೌಡ, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಡಾ. ರಾಜೇಂದ್ರ ಇದ್ದರು.
ವೈಟ್ ಟಾಪಿಂಗ್ಗೆವೇಗ ನೀಡಿ: ರಾವ್
ನಗರದ 220.68 ಕಿ.ಮೀ ಉದ್ದದ 140 ರಸ್ತೆಗಳಲ್ಲಿ 17 ಪ್ಯಾಕೇಜ್ ಅಡಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 79.08 ಕಿ.ಮೀ ಉದ್ದದ 39 ರಸ್ತೆಗಳ ಕೆಲಸ ಪೂರ್ಣಗೊಂಡಿದೆ. 141.59 ಕಿ.ಮೀ ಉದ್ದದ 101 ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಪ್ರಾರಂಭವಾಗದ ರಸ್ತೆಗಳಲ್ಲಿ ಕೂಡಲೇ ಕಾರ್ಯ ಆರಂಭಿಸುವ ಸಲುವಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದರು.