10 ದಿನ ಕಳೆದರೂ ಚರಂಡಿಗಳಲ್ಲಿ ಪ್ಲಾಸ್ಟಿಕ್ ತೆರವುಗೊಳಿಸದ ಜಿಬಿಎ

KannadaprabhaNewsNetwork |  
Published : Sep 13, 2026, 02:00 AM IST
Drainage 3 | Kannada Prabha

ಸಾರಾಂಶ

ನಗರದಲ್ಲಿ ಕಸ ವಿಂಗಡಣೆ ಹಾಗೂ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ವಿಷಜಾಲದ ವಿರುದ್ಧ ತೀವ್ರ ಅಸಮಾಧಾನಗೊಂಡ ವಿಧಾನಮಂಡಲದ ಉಪಸಮಿತಿ ತೆರದ ಚರಂಡಿಗಳಲ್ಲಿ ಪ್ಲಾಸ್ಟಿಕ್ ರಾಶಿ ತೆರವು ಹಾಗೂ ಚಲಾವಣೆಯ ಪ್ಲಾಸ್ಟಿಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ 10 ದಿನ ಕಳೆದರೂ ಜಿಬಿಎ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.

-ದೊಡ್ಡ ಮೋರಿಗಳಲ್ಲಿರುವ ರಾಶಿ ರಾಶಿ ಪ್ಲಾಸ್ಟಿಕ್ ಸ್ವಚ್ಛ ಮಾಡಲು ನಿರ್ಲಕ್ಷ್ಯ

-ವಿಧಾನ ಮಂಡಲದ ಉಪಸಮಿತಿಯ ಸೂಚನೆಗೂ ಪಾಲಿಕೆ ಡೋಂಟ್ ಕೇರ್‌

ಉಮಾಶಂಕರ ಕಾರ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಕಸ ವಿಂಗಡಣೆ ಹಾಗೂ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ವಿಷಜಾಲದ ವಿರುದ್ಧ ತೀವ್ರ ಅಸಮಾಧಾನಗೊಂಡ ವಿಧಾನಮಂಡಲದ ಉಪಸಮಿತಿ ತೆರದ ಚರಂಡಿಗಳಲ್ಲಿ ಪ್ಲಾಸ್ಟಿಕ್ ರಾಶಿ ತೆರವು ಹಾಗೂ ಚಲಾವಣೆಯ ಪ್ಲಾಸ್ಟಿಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ 10 ದಿನ ಕಳೆದರೂ ಜಿಬಿಎ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.

ಸೆ.2ರಂದು ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಉಪಸಮಿತಿಯ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಸದಸ್ಯರಾದ ವಿ.ಎಸ್.ಪೂಜಾರ್, ರವಿಸುಬ್ರಮಣ್ಯ ಅವರಿದ್ದ ತಂಡ ನಗರದ ವಸಂತನಗರ, ಎಚ್ಆರ್‌ಬಿಆರ್ ಲೇ ಔಟ್‌ಗಳ ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ ಹಾಗೂ ಕಸ ವಿಂಗಡಣೆ ಕುರಿತು ಅಳವಡಿಸಿಕೊಂಡಿರುವ ನೂತನ ವಿಧಾನಗಳನ್ನು ಪರಿಶೀಲನೆ ನಡೆಸಿತ್ತು.

ಈ ವೇಳೆ ಘಟಕಗಳ ಪಕ್ಕದಲ್ಲಿಯೇ ಇದ್ದ ದೊಡ್ಡ ದೊಡ್ಡ ಮೋರಿಗಳಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ನೋಡಿ ಆತಂಕ ವ್ಯಕ್ತಪಡಿಸಿ ಕೂಡಲೆ ನಾಳೆಯಿಂದಲೇ ಚರಂಡಿಯ ರಾಶಿ ಪ್ಲಾಸ್ಟಿಕ್ ತೆರವುಗೊಳಿಸಬೇಕು. ಏಕೆಂದರೆ, ಈ ರಾಶಿ ರಾಶಿ ಪ್ಲಾಸ್ಟಿಕ್ ಮೋರಿ ಹಾಗೂ ಮ್ಯಾನ್ ಹೋಲ್‌ಗಳಿಗೆ ಸಿಕ್ಕಿಕೊಂಡು ಚರಂಡಿ ಬಾಯಿಗಳು ಮುಚ್ಚಿಕೊಳ್ಳುತ್ತವೆ. ಚರಂಡಿ ಕಟ್ಟಿಕೊಂಡ ನಂತರ ನೀರು ಕುಡಿಯುವ ನೀರಿನ ಪೈಪ್ ಒಳಗೆ ನುಗ್ಗಿ ಮಿಶ್ರಣವಾಗಿ ಹಲವು ತೊಂದರೆಗಳಾಗುತ್ತವೆ. ನಾಳೆಯೇ ಈ ಕೆಲಸ ಮಾಡಿ ಎಂದು ಸೂಚನೆ ನೀಡಿತ್ತು.

ಅಲ್ಲದೆ, ನಗರದಲ್ಲಿ ಅವ್ಯಾಹತವಾಗಿ ಬಳಕೆಯಲ್ಲಿರುವ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಬೇಕು. ಸಣ್ಣ ಸಣ್ಣ ಅಂಗಡಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಜಪ್ತಿ ಮಾಡಬೇಕು. ಅಂಗಡಿಗಳಿಗೆ ಹೊರ ರಾಜ್ಯಗಳಿಂದ ಬರುವ ಪ್ಲಾಸ್ಟಿಕ್ ಚೀಲಗಳ ರಾಶಿಯನ್ನು ಜಪ್ತಿ ಮಾಡಬೇಕು ಎಂದು ತಾಕೀತು ಮಾಡಿತ್ತು. ಆದರೆ, 10 ದಿನ ಕಳೆದರೂ ಹೊರ ರಾಜ್ಯದಿಂದ ಬರುವ ಯಾವುದೇ ಪ್ಲಾಸ್ಟಿಕ್ ಅನ್ನು ಜಪ್ತಿ ಮಾಡಿಲ್ಲ, ಸಣ್ಣ ಸಣ್ಣ ಅಂಗಡಿ, ಪ್ಲಾಸ್ಟಿಕ್ ಬಳಸುವ ಹೋಟೆಲ್‌ಗಳ ಮೇಲೆ ದಾಳಿಯನ್ನೂ ನಡೆಸಿಲ್ಲ. ಭೇಟಿ ನೀಡಿದಾಗಲೂ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್, ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳಿದ್ದರೂ, ಯಾರೂ ಸಮಿತಿಯ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿಲ್ಲ.

--

ಎಮ್ಮೆ ಚರ್ಮದ ಅಧಿಕಾರಿಗಳು:

ರವಿಸುಬ್ರಮಣ್ಯ ಅಸಮಾಧಾನ

ನಗರದಲ್ಲಿ ಎಮ್ಮೆ ಚರ್ಮದ ಅಧಿಕಾರಿಗಳಿದ್ದಾರೆ, ಅವರಿಗೆ ಏನು ಹೇಳಿದರೂ ತಮಗಲ್ಲ ಎಂಬಂತೆ ವರ್ತಿಸುತ್ತಾರೆ. ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ರೋಗ ಒಳಗೊಳಗೇ ಹೆಚ್ಚುತ್ತಾ ಜನರನ್ನು ಕೊಲ್ಲುತ್ತಿದೆ. ಇದನ್ನು ಆರಂಭದಲ್ಲಿಯೇ ಜಪ್ತಿ ಮಾಡಿ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಾಸಕ ಹಾಗೂ ಸಮಿತಿಯ ಸದಸ್ಯ ರವಿಸುಬ್ರಮಣ್ಯ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಹಲವು ತಿಂಗಳೇ ಕಳೆದಿದೆ. ಆದರೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಚರಂಡಿಯಲ್ಲಿ ರಾಶಿ ಪ್ಲಾಸ್ಟಿಕ್ ತೆರವು ಮಾಡಿ ಹಾಗೂ ಅಂಗಡಿಗಳಲ್ಲಿ ಜಪ್ತಿ ಮಾಡಿ ಎಂದಿದ್ದರೂ ಅಧಿಕಾರಿಗಳು ಕೆಲಸ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು. ನಗರದ ಜನರ ಆರೋಗ್ಯ ಮುಖ್ಯ, ಕ್ಯಾನ್ಸರ್ ಇಂದು ಎಲ್ಲಾ ಕಡೆ ವ್ಯಾಪಿಸುತ್ತಿದೆ. ಇದಕ್ಕೆ ಅಧಿಕಾರಿಗಳೂ ಕಾರಣರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.--

ದೀರ್ಘಕಾಲದ ಸಮಸ್ಯೆಗೆ ಪ್ಲಾಸ್ಟಿಕ್

ಕಾರಣ: ಡಾ.ಸಿ.ಎನ್.ಪಾಟೀಲ್

ಪ್ಲಾಸ್ಟಿಕ್ ನಿಂದ ಮಾನವನ ದೇಹಕ್ಕೆ ದೀರ್ಘಕಾಲದ ತೊಂದರೆ ಇದೆ. ಪ್ಲಾಸ್ಟಿಕ್ ಮಾನವನ ದೇಹಕ್ಕೆ ಸಣ್ಣ ಸಣ್ಣ ಕಣಗಳಾಗಿ ಸೇರುವುದರಿಂದ ತಕ್ಷಣಕ್ಕೆ ಸಮಸ್ಯೆ ಕಾಣದೇ ಇರಬಹುದು. ಆದರೆ, ವಯಸ್ಸಾಗುತ್ತಿದ್ದಂತೆ ಅದರ ಸಮಸ್ಯೆಗಳು ಕಾಣತೊಡಗುತ್ತವೆ ಎಂದು ನಗರದ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಸಿ.ಎನ್.ಪಾಟೀಲ್ ಅಭಿಪ್ರಾಯಪಟ್ಟರು. ಕನ್ನಡ ಪ್ರಭ ಜೊತೆ ಮಾತನಾಡಿದ ಅವರು, ಧೂಮಪಾನದಷ್ಟು ತಕ್ಷಣಕ್ಕೆ ಸಮಸ್ಯೆ ಮಾಡದಿದ್ದರೂ ನಿಧಾನವಾಗಿ ಇದರ ದುಷ್ಪರಿಣಾಮ ಬೀರುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ನಂಬಿ ಬದುಕುತ್ತಿರುವ ರೈತರಿಗೆ ನ್ಯಾಯ ಒದಗಿಸಿ: ರಮೇಶ್‌ ಬಂಡಿಸಿದ್ದೇಗೌಡ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರುತ್ತಿದ್ದಾರೆ: ಎಚ್‌.ಟಿ.ಮಂಜು