ಶಿಗ್ಗಾಂವಿ: ತಾಪಮಾನ ಏರಿಕೆ ತಡೆಗಟ್ಟುವ, ಪರಿಸರ ರಕ್ಷಿಸಿ, ಜೀವ ಉಳಿಸುವ ಕಾರ್ಯಕ್ಕೆ ನಾವೆಲ್ಲ ಸಜ್ಜಾಗಬೇಕಿದೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ, ಎನ್‌ಎಸ್‌ಎಸ್ ಕೋಶದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ ಹಾಗೂ ಸೇವಾ ಮನೋಭಾವ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳ ಕಲಿಕೆಯ ಜತೆಗೆ ಭಾವೈಕ್ಯತೆ, ಪರಿಸರ ಜಾಗೃತಿ, ಯುವ ಶಕ್ತಿ ಸಬಲೀಕರಣ ಆಗಲಿದೆ. ಈ ನಿಟ್ಟಿನಲ್ಲಿ ಸಜ್ಜಾಗಬೇಕು ಎಂದು ಹೇಳಿದರು.
ಈಗಾಗಲೇ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಶಿಬಿರ ಆಯೋಜನೆ ಮಾಡಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ತಳಿಯ ಹೂವಿನ ಸಸ್ಯಗಳು, ನೂರಾರು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಶೈಕ್ಷಣಿಕ ಚಟುವಟಿಕೆ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಲು ನಿರಂತರ ಕಾರ್ಯಕ್ರಮ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಚೈತನ್ಯ ನೀಡುವಂತಹ ಪರಿಸರ ನಿರ್ಮಾಣ ಮಾಡುವ ಮೂಲಕ ವಿವಿ ಸಮಗ್ರ ಬೆಳವಣಿಗೆಗೆ ನೀಲನಕ್ಷೆ ಸಿದ್ಧಗೊಳಿಸಲಾಗಿದೆ ಎಂದರು.ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಗೊಳಿಸಲು ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ, ಎನ್‌ಎಸ್‌ಎಸ್ ಎಂದರೆ ಸ್ವಚ್ಛತೆ ಕಾರ್ಯಕ್ಕೆ ಮಾತ್ರ ಸಿಮೀತವಲ್ಲದೇ, ಸದೃಢ ಭಾರತ ಕಟ್ಟುವ ಸಂಕಲ್ಪವಾಗಿದೆ ಎಂದರು.