ಕನ್ನಡಪ್ರಭ ವಾರ್ತೆ ಮೈಸೂರು
ಹೆಣ್ಣಿನಲ್ಲಿ ಭೇದಭಾವಗಳ ಗುಣ ಇರಬಾರದು. ನಾವೆಲ್ಲರೂ ಒಂದೇ ಎಂಬ ಮನೋಭಾವವಿದ್ದರೆ, ಯಶಸ್ವಿಯಾಗಲು ಸಾಧ್ಯ ಎಂದು ರಂಗಾಯಣ ಕಲಾವಿದೆ ಗೀತಾ ಮೋಂಟಡ್ಕ ತಿಳಿಸಿದರು.ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿಯು ನಟರಾಜ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಲ್ಲಿರುವ ಆತ್ಮವಿಶ್ವಾಸದಿಂದ ತಾಯಿಯಾಗಿ, ಮಡದಿಯಾಗಿ, ಅಜ್ಜಿಯಾಗಿ, ಗೆಳತಿಯಾಗಿ ಎಲ್ಲಾ ರಂಗದಲ್ಲೂ ತನ್ನ ಪ್ರೀತಿಯನ್ನು ಧಾರೆ ಎರೆಯುತ್ತಾಳೆ. ಮಹಿಳೆ ಎಲ್ಲವನ್ನು ಗ್ರಹಿಸಿ ನಂತರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಮುಂದಿಡಬೇಕು ಎಂದು ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿದ ಅಂತಾರಾಷ್ಟ್ರೀಯ ಪುರೋಹಿತರು ಸಂಸ್ಥಾಪಕ ಅಧ್ಯಕ್ಷೆ ಭ್ರಮರಾಂಭ ಮಹೇಶ್ವರಿ ಮಾತನಾಡಿ, ಆಧುನಿಕವಾಗಿ ಅಲ್ಲ ವೇದಗಳಲ್ಲೂ ಮಾತೃದೇವೋ ಭವ ಎಂದು ಹೇಳಿ ಹೆಣ್ಣಿಗೆ ಸ್ಥಾನ ನೀಡಲಾಗಿದೆ. ಹೆಣ್ಣು ಯಾವಾಗಲೂ ಕ್ರಿಯಾಶೀಲರಾಗಿರುತ್ತಾರೆ. ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಇರುತ್ತಾರೆ ಎಂದರು.ಹೆಣ್ಣು ಮಕ್ಕಳು ಆಧುನಿಕತೆ ಬೆಳೆದಂತೆ ಆಧುನಿಕತೆಗೆ ಮಾರು ಹೋಗದೆ ಸಂಪ್ರದಾಯವನ್ನು ಸರಿಯಾದ ರೀತಿಯಲ್ಲಿ ಆಚರಿಸಬೇಕು. ಸಂಸ್ಕಾರಯುತವಾದ ನಾರಿ ದೇಶಕ್ಕೆ ತಿಲಕ. ಹೆಣ್ಣು ಎಂಬುವವಳು ದೇವಿ ಸ್ವರೂಪಿಣಿ. ಮುಂದುವರೆದು ಎಲ್ಲವನ್ನು ನಿಭಾಯಿಸಬಲ್ಲ ಸಾಮರ್ಥ್ಯವುಳ್ಳವಳೇ ಹೆಣ್ಣು. ಅವಳಿಲ್ಲದಿದರೆ ಏನೂ ಸಾಗದು ಎಂದು ಅವರು ಹೇಳಿದರು.
ಇದೇ ವೇಳೆ ಅನುಷಾ- ಒನಕೆ ಓಬ್ಬವ್ವ ಪಾತ್ರ, ಪಲ್ಲವಿ- ಕಿತ್ತೂರ ರಾಣಿ ಚೆನ್ನಮ್ಮ, ಹೇಮ- ಝಾನ್ಸಿರಾಣಿ ಲಕ್ಷ್ಮೀಬಾಯಿ ಹಾಗೂ ಸಿಂಚನರಾಣಿ- ಅಬ್ಬಕ್ಕ ಪಾತ್ರದ ಛದ್ಮವೇಷವನ್ನು ಧರಿಸಿ ಅಭಿನಯಿಸಿದರು.ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಬಿ. ಮಹೇಶ್ ದಳಪತಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಂ.ಎಸ್. ಸಂಧ್ಯಾರಾಣಿ ಇದ್ದರು. ಕೃತಿಕಾ ಮತ್ತು ತಂಡವದರು ಪ್ರಾರ್ಥಿಸಿದರು. ಅಕ್ಷಿತಾ ಸ್ವಾಗತಿಸಿದರು. ಚಂದನಾ ನಿರೂಪಿಸಿದರು. ವಿವರ್ಷ ವಂದಿಸಿದರು.