ಗೆಜ್ಜೆಪೂಜೆಯಿಂದ ನೃತ್ಯ ಸಂಸ್ಕಾರಕ್ಕೆ ಮುನ್ನುಡಿ

KannadaprabhaNewsNetwork |  
Published : Sep 13, 2026, 02:30 AM IST
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇತ್ತೀಚೆಗೆ ಸೂರ್ಯ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗೆಜ್ಜೆಪೂಜೆ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು.  | Kannada Prabha

ಸಾರಾಂಶ

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸವೂ ಇಂತಹ ಕಲಾ ಸಂಸ್ಥೆಗಳಿಂದ ನಡೆಯುತ್ತಿದೆ

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇತ್ತೀಚೆಗೆ ಸೂರ್ಯ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗೆಜ್ಜೆಪೂಜೆ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮವು ಸಾಂಸ್ಕೃತಿಕ ಸೊಬಗಿನಿಂದ ಜರುಗಿತು.

ನೃತ್ಯ ಕಲಿಕೆಯಲ್ಲಿ ಪ್ರಮುಖ ಘಟ್ಟವಾಗಿರುವ ಗೆಜ್ಜೆ ಪೂಜೆಯಲ್ಲಿ ಟ್ರಸ್ಟ್‌ನ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಪಾಲ್ಗೊಂಡು ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನೀಡಿದರು. ಪುಟಾಣಿಗಳಿಂದ ಹಿಡಿದು ಯುವತಿಯರವರೆಗೆ ವಿದ್ಯಾರ್ಥಿಗಳು ಶ್ರದ್ಧೆ, ಲಯಬದ್ಧತೆ ಹಾಗೂ ಅಭ್ಯಾಸದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಗಾದೆಪ್ಪ ಸೂರ್ಯಕಲಾ ಟ್ರಸ್ಟ್‌ನ ಮುಖ್ಯಸ್ಥ ಹಾಗೂ ನೃತ್ಯ ತರಬೇತುದಾರ ಕೆ.ಸಿ. ಅಭಿಷೇಕ್ ಮಾರ್ಗದರ್ಶನದಿಂದ ಬಳ್ಳಾರಿ ನಗರದಲ್ಲಿ ನೂರಾರು ಬಾಲಕ-ಬಾಲಕಿಯರು ನೃತ್ಯ ಕಲಿಯುವ ಜತೆಗೆ ಸಾಂಸ್ಕೃತಿಕ ಸಂಸ್ಕಾರ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸವೂ ಇಂತಹ ಕಲಾ ಸಂಸ್ಥೆಗಳಿಂದ ನಡೆಯುತ್ತಿದೆ. ನೃತ್ಯ ಕೇವಲ ಮನರಂಜನೆಯ ಕಲೆಯಲ್ಲ. ಅದು ಶಿಸ್ತು, ಏಕಾಗ್ರತೆ, ಸಮಯಪ್ರಜ್ಞೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಸೂರ್ಯಕಲಾ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದರು.

ಆರ್.ಕೆ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ನಾರಾ ಚರಂತಿ ಮಾತನಾಡಿ, ಸೂರ್ಯಕಲಾ ಟ್ರಸ್ಟ್ ಹಲವು ವರ್ಷಗಳಿಂದ ಮಕ್ಕಳಿಗೆ ನೃತ್ಯ ತರಬೇತಿ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ. ಮಕ್ಕಳ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ದೊರೆತಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಕಾರ್ಯ ಟ್ರಸ್ಟ್ ಮುಂದುವರಿಸಲಿ ಎಂದು ಆಶಿಸಿದರು.

ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಅವರ ಕೈಯನ್ನು ನೃತ್ಯ ತರಬೇತುದಾರ ಅಭಿಷೇಕ್ ಕೈಗೆ ನೀಡಿ. ಮಕ್ಕಳಿಗೆ ನೃತ್ಯ ಮತ್ತು ಕಲೆಗಳ ಸಂಸ್ಕಾರ ನೀಡಿದರೆ ಶಿಸ್ತುಬದ್ಧರಾಗಿ ಬೆಳೆದು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.

ಮಕ್ಕಳನ್ನು ಮೊಬೈಲ್, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿಟ್ಟು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಸೃಜನಶೀಲ ಚಟುವಟಿಕೆಗಳತ್ತ ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಬೆಳೆಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದರು.

ಜೆಸ್ಕಾಂ ಇಂಜಿನಿಯರ್ ಪ್ರವೀಣಾ ಎಚ್., ಧೃವ ಆಸರೆ ಫೌಂಡೇಶನ್ ಅಧ್ಯಕ್ಷ ಕನಕ ಹಾಗೂ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ರಾಜೇಶ್ವರಿ ಮಾತನಾಡಿ, ಸೂರ್ಯಕಲಾ ಟ್ರಸ್ಟ್‌ನ ಕಾರ್ಯಕ್ಕೆ ಶುಭ ಹಾರೈಸಿದರು.

ಸೂರ್ಯಕಲಾ ಟ್ರಸ್ಟ್‌ನ ಮುಖ್ಯಸ್ಥ ಕೆ.ಸಿ. ಅಭಿಷೇಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕಲಾಸಕ್ತಿ ಬೆಳೆಸುವುದು ಹಾಗೂ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುವುದು ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಟ್ರಸ್ಟ್‌ನ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರದರ್ಶನಗಳು ನಡೆದವು. ಎಂ. ಗಾನವಿ, ಟಿ.ಆರ್. ಸಾನ್ವಿ, ಮನ್ವಿತ, ಲಕ್ಷ್ಮಿದವಿ, ಯಾಗಪ್ರಿಯ, ಎ.ಉಮಾಶ್ರೀ, ಕೆ.ಎಂ. ಯೋಗೀಶ, ಶ್ರೀನಿಕಾ ತಲಾರಿ, ಸಿಪಿ ಜಾರ್ವಿ, ಶ್ರಾವ್ಯ, ರಿತ್ವಿಕ್, ಎಚ್.ಎಂ. ಇಂಚರ, ನೈದಿಲೆ, ಪೂರ್ವಿಕಾ, ಬಿ.ಸಮನ್ವಿ, ಅಕ್ಷಯ ಹಾಗೂ ದೀಕ್ಷಾ ಗೆಜ್ಜೆಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಿ. ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಪೋಷಕರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳ ನೃತ್ಯ ಪ್ರದರ್ಶನ ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಗಣೇಶೋತ್ಸವದ ಸಂಭ್ರಮ; ಡಿಜೆ ನಿಷೇಧಕ್ಕೆ ಅಸಮಾಧಾನ
ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ: ಮಾಜಿ ಸಂಸದ ಸಂಗಣ್ಣ ಕರಡಿ