ವಿಘ್ನವಿನಾಶಕ ಗಣಪನ ಆಗಮನಕ್ಕೆ ಉತ್ತರ ಕನ್ನಡ ಜಿಲ್ಲೆ ಸಜ್ಜಾಗಿದೆ. ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಸಿದ್ಧತೆ ಭರದಿಂದ ಸಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಕಾರವಾರ: ವಿಘ್ನವಿನಾಶಕ ಗಣಪನ ಆಗಮನಕ್ಕೆ ಉತ್ತರ ಕನ್ನಡ ಜಿಲ್ಲೆ ಸಜ್ಜಾಗಿದೆ. ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಸಿದ್ಧತೆ ಭರದಿಂದ ಸಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮಣ್ಣಿನ ಆಕರ್ಷಕ ಗಣೇಶ ಮೂರ್ತಿಗಳು ರೂಪುಗೊಂಡು ಮಂಟಪಗಳಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿವೆ.ವಿವಿಧ ಆಕರ್ಷಕ ಪರಿಕಲ್ಪನೆಗಳೊಂದಿಗೆ ಮಂಟಪಗಳ ನಿರ್ಮಾಣವೂ ಭರದಿಂದ ನಡೆಯುತ್ತಿದ್ದು, ಯುವಕರು, ಮಕ್ಕಳು ಸೇರಿದಂತೆ ಭಕ್ತರು ಉತ್ಸಾಹದಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಾರವಾರ ಸೇರಿದಂತೆ ವಿವಿಧೆಡೆ ಗಣೇಶೋತ್ಸವ ಸಮಿತಿಗಳು 11 ದಿನಗಳ ಕಾಲ ವಿಜೃಂಭಣೆ, ಭಕ್ತಿ-ಭಾವದಿಂದ ಗಣೇಶನನ್ನು ಆರಾಧಿಸುತ್ತಾರೆ. ಧಾರ್ಮಿಕ, ಸಾಂಸ್ಕೃತಿಕ, ಯಕ್ಷಗಾನ ಕಾರ್ಯಕ್ರಮಗಳು ಗಣೇಶೋತ್ಸವದ ಮೆರುಗನ್ನು ಹೆಚ್ಚಿಸುತ್ತವೆ. ಹಲವೆಡೆ ಅನ್ನಸಂತರ್ಪಣೆಯನ್ನೂ ಏರ್ಪಡಿಸುತ್ತಾರೆ.ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳು, ವಿದ್ಯುದ್ದೀಪಗಳು, ದಿನಸಿ ಸಾಮಗ್ರಿಗಳು, ತರಕಾರಿಗಳ ಖರೀದಿ ಜೋರಾಗಿದೆ. ಮನೆಮನೆಗಳಲ್ಲೂ ಚಕ್ಕುಲಿ, ಕರಜೀಕಾಯಿ, ಮೋದಕ ಮತ್ತಿತರ ತಿನಿಸುಗಳ ತಯಾರಿ ನಡೆದಿದೆ.
ಸಾರ್ವಜನಿಕ ಗಣೇಶೋತ್ಸವ ಎಂದರೆ ಮೆರವಣಿಗೆ, ವಾದ್ಯ-ವೈಭವ ಹಾಗೂ ಸಂಭ್ರಮಕ್ಕೆ ವಿಶೇಷ ಸ್ಥಾನ. ಆದರೆ ಈ ಬಾರಿ ಡಿಜೆ ಬಳಕೆಗೆ ನಿರ್ಬಂಧ ವಿಧಿಸಿರುವುದು ಹಲವು ಗಣೇಶೋತ್ಸವ ಸಮಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹಬ್ಬದ ಸಂದರ್ಭದಲ್ಲಿ ನಿಯಮ-ನಿಬಂಧನೆಗಳನ್ನು ಪಾಲಿಸಲು ಸಿದ್ಧವಿದ್ದರೂ, ಡಿಜೆ ಸೇರಿದಂತೆ ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿರುವುದು ಉತ್ಸವದ ಉತ್ಸಾಹಕ್ಕೆ ಕಡಿವಾಣ ಹಾಕಿದಂತಾಗಿದೆ ಎಂಬ ಅಭಿಪ್ರಾಯ ಸಮಿತಿಗಳಿಂದ ಕೇಳಿಬರುತ್ತಿದೆ. ಬೇರೆ ಎಲ್ಲ ಸಂದರ್ಭಗಳಲ್ಲೂ ಡಿಜೆ ಬಳಕೆಗೆ ಅವಕಾಶ ನೀಡಿ ಗಣೇಶೋತ್ಸವಕ್ಕೆ ಡಿಜೆ ಬಳಕೆಗೆ ನಿರ್ಬಂಧ ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.ಒಟ್ಟಿನಲ್ಲಿ ಗಣಪನ ಆಗಮನಕ್ಕೆ ಜಿಲ್ಲೆ ಸಜ್ಜಾಗಿದ್ದರೂ, ಡಿಜೆ ನಿಷೇಧದ ಚರ್ಚೆ ಗಣೇಶೋತ್ಸವದ ಸಂಭ್ರಮದ ನಡುವೆಯೇ ಹೊಸ ಸದ್ದು ಮಾಡುತ್ತಿದೆ.ಸಿದ್ಧತೆ ಪೂರ್ಣ: ಗಣೇಶೋತ್ಸವದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. 11 ದಿನಗಳ ಸಡಗರ ಸೋಮವಾರದಿಂದ ಆರಂಭವಾಗಲಿದೆ ಎಂದು ಗಣೇಶೋತ್ಸವ ಸಮಿತಿ ಪ್ರಮುಖ ದೀಪಕ ನಾಯ್ಕ ಹೇಳಿದರು.ಬೇರೆ ಎಲ್ಲ ಸಂದರ್ಭಗಳಲ್ಲಿ ಡಿಜೆಗೆ ಅವಕಾಶಕೊಟ್ಟು ಗಣೇಶೋತ್ಸವಕ್ಕೆ ಮಾತ್ರ ಡಿಜೆಗೆ ನಿರ್ಬಂಧ ವಿಧಿಸುವುದು ಸರಿಯಲ್ಲ. ಕೂಡಲೆ ಈ ನಿರ್ಧಾರ ಮರುಪರಿಶೀಲಿಸಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.